ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತೆರೆದ ಚರಂಡಿಗೆ ಬಿದ್ದ ಎಮ್ಮೆಯೊಂದು ಹೊರಬರಲಾಗದೆ ಪರದಾಡಿದ ಘಟನೆ ನಗರದ ಜಿ.ಕೆ. ರಾಮ್ ಕಟ್ಟಡದ ಸಮೀಪ ಬುಧವಾರ ನಡೆದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.

ಚರಂಡಿಗೆ ಎಮ್ಮೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಚರಂಡಿಗೆ ಇಳಿದು ಎಮ್ಮೆಯನ್ನು ಮೇಲಕ್ಕೆತ್ತಿ ರಕ್ಷಿಸಿದರು.
ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ಪ್ರಮುಖ ಅಗ್ನಿಶಾಮಕ ಸಪ್ನಿಲ್ ಜಿ. ಪೆಡ್ನೆಕರ್, ಅಗ್ನಿಶಾಮಕ ಚಾಲಕ ಕೃಷ್ಣ ನಾಯ್ಕ ಹಾಗೂ ಅಗ್ನಿಶಾಮಕ ದೀಪಕ್ ಅಂಕೋಲೆಕರ್, ಮಿಥುನ್ ಅಂಕೋಲೇಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಗರದ ವಿವಿಧೆಡೆ ಚರಂಡಿಗಳು ತೆರೆದ ಸ್ಥಿತಿಯಲ್ಲಿರುವುದರಿಂದ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಾಗೂ ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ತೆರೆದ ಚರಂಡಿಗಳಿಗೆ ಸೂಕ್ತ ಮುಚ್ಚಳ ಅಳವಡಿಸುವಂತೆ ನಗರಾಡಳಿತಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.


