ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಶ್ರಮಿಸುತ್ತಿದ್ದ 22ರ ಹರೆಯದ ಯುವಕ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಉಳಗಾದಲ್ಲಿ ನಡೆದಿದೆ. ಪ್ರಸಾದ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ.
ಉಳಗಾದ ಓತಿಭಾಗದ ರಾಜೇಶ ಗುಣಾ ಕುಡ್ತರಕರ ಅವರ ಪುತ್ರ ಪ್ರಸಾದ್ ರಾಜೇಶ ಕುಡ್ತರಕರ (22) ಮೃತ ಯುವಕ. ಐಟಿಐ ಶಿಕ್ಷಣ ಪಡೆದಿದ್ದ ಪ್ರಸಾದ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶ್ರಮಜೀವಿಯಾಗಿದ್ದ ಅವರು ಉತ್ತಮ ಗುಣದಿಂದ ಅಪಾರ ಸ್ನೇಹಿತರನ್ನು ಹೊಂದಿದ್ದರು. ಊರಿನ ಮಗನಂತಿದ್ದ ಪ್ರಸಾದ್ ಚಿಕ್ಕ ವಯಸ್ಸಿನಲ್ಲೇ ಜೀವನದ ಹಲವು ಕನಸುಗಳನ್ನು ಕಂಡಿದ್ದರು.
ದೂರಿನ ಪ್ರಕಾರ ಮಂಗಳವಾರ ಬೆಳಗ್ಗೆ 7.05ರ ಸುಮಾರಿಗೆ ಬಸುಣಗಾ, ಉಳಗಾದಲ್ಲಿ ಜ್ಞಾನೇಶ್ವರ ನಾಯ್ಕ ಅವರ ಮನೆಯ ಸಮೀಪ ಈ ಅಪಘಾತ ಸಂಭವಿಸಿದೆ. ಪ್ರಸಾದ್ ಅವರು ಬಜಾಜ್ ಪಲ್ಸರ್ ಬೈಕ್ನಲ್ಲಿ ಬಸುಣಗಾದಿಂದ ಶಿನಗುಡ್ಡಾ ಕಡೆಗೆ ತೆರಳುತ್ತಿದ್ದಾಗ, ಎದುರಿನಿಂದ ಬಂದ ಕೆಎ-30/ಎ-4630 ಸಂಖ್ಯೆಯ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಪ್ರಸಾದ್ ಅವರ ಹಣೆಗೆ ಗಂಭೀರ ರಕ್ತಗಾಯವಾಗಿದ್ದು, ಎರಡೂ ಮೊಣಕಾಲುಗಳಿಗೆ ಗಾಯಗಳಾಗಿದ್ದವು. ಕೂಡಲೇ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಭಟ್ಕಳ ಸಮೀಪ ಅವರು ಮೃತಪಟ್ಟಿದ್ದಾರೆ.
ಆಟೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣರಾದ ಆರೋಪದಡಿ ನಾಗವೇಂದ್ರ ವಿನಾಯಕ ಶೇಟ್ ಧೋಲ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


