ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಾಲ ಮಾಡಿ ಟ್ಯಾಕ್ಸಿ ಖರೀದಿಸಿ ಕುಟುಂಬ ನಿರ್ವಹಿಸುತ್ತಿರುವ ಸ್ಥಳೀಯ ಚಾಲಕರ ಬದುಕಿಗೆ ಬಾಡಿಗೆ ಬೈಕ್ ಸೇವೆ ಕಂಟಕವಾಗಲಿದೆ ಎಂದು ಆರೋಪಿಸಿ ಶ್ರೀ ಸಾಯಿಬಾಬಾ ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಸಂಘ ಜಿಲ್ಲಾಡಳಿತದ ಮೊರೆ ಹೋಗಿದೆ.
ಓಲಾ, ಉಬರ್, ರಾಪಿಡೋ ಸೇರಿದಂತೆ ಕಾರವಾರದ ಆರ್ಎನ್ ಟ್ರಾವೆಲ್ಸ್ ಮೂಲಕ ದ್ವಿಚಕ್ರವಾಹನಗಳನ್ನು ಬಾಡಿಗೆ ಆಧಾರದಲ್ಲಿ ನೀಡುವುದನ್ನು ನಿಷೇಧಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಕಾರವಾರದಲ್ಲಿ ಆರ್ಎನ್ ಟ್ರಾವೆಲ್ಸ್ ಹೆಸರಿನಲ್ಲಿ ದ್ವಿಚಕ್ರವಾಹನಗಳನ್ನು ಬಾಡಿಗೆಗೆ ನೀಡುವ ಜಾಹೀರಾತು ನೀಡಲಾಗಿದೆ. ಇದರಿಂದ ಟ್ಯಾಕ್ಸಿಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿ, ಸ್ಥಳೀಯ ಚಾಲಕರ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ಸಂಘ ತಿಳಿಸಿದೆ.
ಈಗಾಗಲೇ ಅನೇಕ ಟ್ಯಾಕ್ಸಿ ಮಾಲಕರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಾಹನಗಳನ್ನು ಖರೀದಿಸಿದ್ದಾರೆ. ಬಾಡಿಗೆ ಬೈಕ್ ಸೇವೆ ಹೆಚ್ಚಾದರೆ ಸಾಲ ಮರುಪಾವತಿ ಕಷ್ಟವಾಗುವುದರ ಜತೆಗೆ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರವಾಸೋದ್ಯಮದ ಅವಕಾಶಗಳ ನೆಪದಲ್ಲಿ ಇಂತಹ ಸೇವೆಗಳಿಗೆ ಅವಕಾಶ ನೀಡಬಾರದು. ಓಲಾ, ಉಬರ್, ರಾಪಿಡೋ ಬಾಡಿಗೆ ಬೈಕ್ ಹಾಗೂ ಆರ್ಎನ್ ಟ್ರಾವೆಲ್ಸ್ಗೆ ಪರವಾನಗಿ ನೀಡುವ ಮುನ್ನ ಸಮಗ್ರವಾಗಿ ವಿಚಾರಣೆ ನಡೆಸಬೇಕು ಎಂದು ಸಂಘ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಘು ನಾಯ್ಕ, ಉಪಾಧ್ಯಕ್ಷರಾದ ಪ್ರಮೋದ ನಾಯ್ಕ, ಮಂಜು ರಾಥೋಡ್, ಲಕ್ಷ್ಮೀಕಾಂತ ಕೊಳಂಬಕರ್ ಹಾಗೂ ಸಂತೋಷ್ ನಾಯ್ಕ ಉಪಸ್ಥಿತರಿದ್ದರು.


