ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್ಕಾಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀಟರ್‌ ರೀಡರ್‌ಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಬೃಹತ್ ಮುಷ್ಕರ ನಡೆಸಿದರು. ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು 200 ಮಂದಿ ಮುಷ್ಕರದಲ್ಲಿ ಭಾಗವಹಿಸಿ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.

Banner Ad

ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಮುಷ್ಕರದಲ್ಲಿ, ಹೊರಗುತ್ತಿಗೆ ಮೀಟರ್‌ ರೀಡರ್‌ಗಳಿಗೆ ನಿಗದಿತ ಕನಿಷ್ಠ ವೇತನ ಪಾವತಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.

ಸೋಮವಾರ ಮಧ್ಯಾಹ್ನ 1.45ರ ವೇಳೆಗೆ ಮುಷ್ಕರ ನಿರತರ ಮನವಿಯನ್ನು ಸ್ವೀಕರಿಸಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಮೀಟರ್‌ ರೀಡರ್‌ಗಳ ಸಮಸ್ಯೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೂ ಸಂಬಂಧಿಸಿದ ಪ್ರಮುಖ ವಿಷಯವಾಗಿದೆ ಎಂದು ತಿಳಿಸಿದರು.

ಈ ಕುರಿತು ಇಂಧನ ಸಚಿವರು ಹಾಗೂ ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಕ್ಟೋಬರ್ 15ರೊಳಗೆ ಮುಷ್ಕರ ನಿರತ ವೇದಿಕೆಯ ಪದಾಧಿಕಾರಿಗಳು ಹಾಗೂ ಹೊರಗುತ್ತಿಗೆ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮುಷ್ಕರ ನಿರತರಿಗೆ ಮನವಿ ಮಾಡಲಾಗಿದೆ.

ವೇದಿಕೆಯ ರಾಜ್ಯಾಧ್ಯಕ್ಷ ಲೀಲಸಾಗರ, ಗೌರವಾಧ್ಯಕ್ಷ ಬೆಟ್ಟೆಸ್ವಾಮಿ ಗೌಡ, ಉಪಾಧ್ಯಕ್ಷ ಪರಶುರಾಮ ರಾಥೋಡ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಪ್ಪ ಭಾವಿಕಟ್ಟಿ, ರಾಜ್ಯ ಸಹಕಾರ್ಯದರ್ಶಿ ಜ್ಞಾನೇಶ್ ಕೊಳಂಬಕರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

 

Please Share: