ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಹೋಟೆಲ್ವೊಂದರ ಐದು ವರ್ಷಗಳ ಬಾಕಿ ತೆರಿಗೆಯಲ್ಲಿ ₹25 ಸಾವಿರವನ್ನು ಕೋವಿಡ್ ನೆಪದಲ್ಲಿ ನಿಯಮಬಾಹಿರವಾಗಿ ಮನ್ನಾ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಮಾಜಾಳಿ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕೇಳಿಬಂದಿದೆ.
ಮಾಜಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಲ್ವೊಂದಕ್ಕೆ ಕಳೆದ ಐದು ವರ್ಷಗಳಿಂದ ಒಟ್ಟು ₹50 ಸಾವಿರ ತೆರಿಗೆ ಬಾಕಿ ಇದೆ. ಆದರೆ, ಕೋವಿಡ್ ಸಾಂಕ್ರಾಮಿಕದ ನೆಪವೊಡ್ಡಿ ಜುಲೈ ತಿಂಗಳ ಸಾಮಾನ್ಯ ಸಭೆಯಲ್ಲಿ ಬಾಕಿ ತೆರಿಗೆಯ ಶೇ.50ರಷ್ಟು ಅಂದರೆ ₹25 ಸಾವಿರ ಮನ್ನಾ ಮಾಡುವ ಕುರಿತು ಠರಾವು ಅಂಗೀಕರಿಸಲಾಗಿದೆ. ಹೋಟೆಲ್ ಮಾಲೀಕರು ₹25 ಸಾವಿರ ಮಾತ್ರ ಪಾವತಿಸಲು ಸಿದ್ಧರಾಗಿದ್ದು, ಪಿಡಿಒ ಅದನ್ನು ಅಂಗೀಕರಿಸಲು ಮುಂದಾಗಿದ್ದಾರೆ ಎಂದು ಮಾಜಾಳಿ ಗ್ರಾಪಂ ಮಾಜಿ ಸದಸ್ಯ ಚಂದ್ರಹಾಸ ದೇವಿದಾಸ ಕೋಠಾರಕರ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಆರೋಪಿಸಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಡಿ ಸರ್ಕಾರದ ಪೂರ್ವಾನುಮತಿ ಅಥವಾ ಸಂಬಂಧಿಸಿದ ಉನ್ನತಾಧಿಕಾರಿಗಳ ನಿರ್ದಿಷ್ಟ ನಿಯಮಾವಳಿಗಳಿಲ್ಲದೆ ಸಾಮಾನ್ಯ ಸಭೆಯ ಠರಾವಿನ ಮೂಲಕವೇ ವಾಣಿಜ್ಯ ತೆರಿಗೆಯನ್ನು ಈ ಪ್ರಮಾಣದಲ್ಲಿ ಕಡಿತಗೊಳಿಸಲು ಪಿಡಿಒಗೆ ಅಧಿಕಾರವಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ನೆಪದಲ್ಲಿ ಸಾರ್ವಜನಿಕ ಹಾಗೂ ಪಂಚಾಯಿತಿಯ ತೆರಿಗೆ ಹಣವನ್ನು ಖಾಸಗಿ ಹೋಟೆಲ್ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತೆರಿಗೆ ಮನ್ನಾ ಮಾಡಲಾಗಿದೆ ಎಂಬ ಶಂಕೆಯಿದ್ದು, ಇದರಲ್ಲಿ ಆಡಳಿತ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.
ತೆರಿಗೆ ಮನ್ನಾದಿಂದ ಮಾಜಾಳಿ ಗ್ರಾಪಂನ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಹಾಗೂ ಸರ್ಕಾರದ ಆದಾಯಕ್ಕೆ ನಷ್ಟ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜುಲೈ ತಿಂಗಳ ಸಾಮಾನ್ಯ ಸಭೆಯ ನಿಯಮಬಾಹಿರ ಠರಾವನ್ನು ರದ್ದುಪಡಿಸಿ, ಪ್ರಕರಣದ ಕುರಿತು ತನಿಖೆ ನಡೆಸಬೇಕು. ಅಕ್ರಮಕ್ಕೆ ಕಾರಣರಾದ ಪಿಡಿಒ ವಿರುದ್ಧ ಇಲಾಖಾ ಶಿಸ್ತುಕ್ರಮ ಕೈಗೊಂಡು, ಹೋಟೆಲ್ನಿಂದ ಬರಬೇಕಾದ ಸಂಪೂರ್ಣ ₹50 ಸಾವಿರ ತೆರಿಗೆಯನ್ನು ವಸೂಲಿ ಮಾಡಲು ಆದೇಶಿಸಬೇಕು ಎಂದು ಚಂದ್ರಹಾಸ ದೇವಿದಾಸ ಕೋಠಾರಕರ ಒತ್ತಾಯಿಸಿದ್ದಾರೆ.
ಮನವಿಯ ಪ್ರತಿಯನ್ನು ಕಾರವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೂ ಸಲ್ಲಿಸಲಾಗಿದೆ.


