ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸೀಬರ್ಡ್‌ ಯೋಜನೆಗಾಗಿ ಭೂಮಿ ನೀಡಿದ ಸ್ಥಳೀಯರು ಹಾಗೂ ನಿರಾಶ್ರಿತರನ್ನು ಕಡೆಗಣಿಸಿ, ಹೊರರಾಜ್ಯದ ಒಂದೇ ಪಿನ್‌ಕೋಡ್‌ನ 25 ಮಂದಿಯನ್ನು ಗ್ರೂಪ್‌ ‘ಡಿ’ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಸೀಬರ್ಡ್‌ ನಿರಾಶ್ರಿತ, ಕೂಲಿಕಾರ್ಮಿಕರ ಅಸಂಘಟಿತ ಸಂಘದ ಅಧ್ಯಕ್ಷ ಸುನೀಲ್ ನಾಯ್ಕ ಆರೋಪಿಸಿದರು.

Banner Ad

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸೀಬರ್ಡ್‌ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ನಿರ್ಲಕ್ಷ್ಯ ಮುಂದುವರಿದಿದೆ ಎಂದು ದೂರಿದರು.

ವಜ್ರಕೋಶದಲ್ಲಿರುವ ಎನ್‌ಇಡಿ ಇಲಾಖೆಯ ಸಿವಿಲಿಯನ್ ವಿಭಾಗದಲ್ಲಿ 260 ಟ್ರೇಡ್ಸ್‌ಮೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಹೊರರಾಜ್ಯದ ಒಂದೇ ಪಿನ್‌ಕೋಡ್‌ನ 25 ಮಂದಿಯನ್ನು ಆಯ್ಕೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸ್ಥಳೀಯರು, ಸೀಬರ್ಡ್‌ ನಿರಾಶ್ರಿತರು ಹಾಗೂ ರಾಜ್ಯದ ಅಭ್ಯರ್ಥಿಗಳಲ್ಲಿ ಒಬ್ಬರಿಗೂ ಅವಕಾಶ ದೊರೆತಿಲ್ಲ ಎಂದು ಆರೋಪಿಸಿದರು. ಇದೇ ರೀತಿ 70 ಫೈರ್‌ಮ್ಯಾನ್ ಹುದ್ದೆಗಳಲ್ಲಿಯೂ ಹೊರರಾಜ್ಯದವರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ದೇಶದ ರಕ್ಷಣಾ ಉದ್ದೇಶಕ್ಕಾಗಿ ಸ್ಥಳೀಯರು ತಮ್ಮ ಭೂಮಿ, ನೆಲ ಹಾಗೂ ಜಲವನ್ನು ನೀಡಿದ್ದು, ಇದೀಗ ಅವರನ್ನೇ ಉದ್ಯೋಗದಲ್ಲಿ ಕಡೆಗಣಿಸಲಾಗುತ್ತಿದೆ. ಸೀಬರ್ಡ್‌ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಭೂಮಿ ನೀಡುವ ಸಂದರ್ಭದಲ್ಲಿ ಜಿಲ್ಲಾಡಳಿತ, ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕುರಿತು ಠರಾವು ಮಾಡಿದ್ದರೆ ಅವಕಾಶ ಕಲ್ಪಿಸಬಹುದಿತ್ತು ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಸುನೀಲ್ ನಾಯ್ಕ ತಿಳಿಸಿದರು.

ಸೀಬರ್ಡ್‌ನ ಗ್ರೂಪ್‌ ‘ಡಿ’ ಹುದ್ದೆಗಳ ನೇಮಕಾತಿ ಕಾರವಾರದಲ್ಲೇ ನಡೆಯಬೇಕು. ಶೇ.70ರಷ್ಟು ಹುದ್ದೆಗಳನ್ನು ಸ್ಥಳೀಯರು ಹಾಗೂ ನಿರಾಶ್ರಿತರಿಗೆ ನೀಡಬೇಕು. ಈ ಕುರಿತು ಶಾಸಕ, ಜಿಲ್ಲಾಡಳಿತ ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆ ಮುಂದುವರಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸೀಬರ್ಡ್‌ ನಿರಾಶ್ರಿತರಾದ ದಿಗಂಬರ ಆರ್. ಗೌಡ, ಸುಬ್ರಮಣ್ಯ ಗೌಡ, ಪ್ರಶಾಂತ ನಾಯ್ಕ ಹಾಗೂ ಗುರು ಗೌಡ ಉಪಸ್ಥಿತರಿದ್ದರು.

 

Please Share: