ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಅಧಿಕಾರಿಗಳ ನಿಗಾ ನಡುವೆಯೂ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳುಗಾರಿಕೆಗೆ ಗ್ರಾಮಸ್ಥರೇ ಬ್ರೇಕ್ ಹಾಕಿದ್ದು, ಮರಳು ತುಂಬಿದ್ದ ವಾಹನ ಸೇರಿದಂತೆ ಸಂಬಂಧಿತ ವ್ಯಕ್ತಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಕಣಸಗಿರಿಯಲ್ಲಿ ಗುರುವಾರ ನಡೆದಿದೆ.

Banner Ad

ಕಣಸಗಿರಿ ಹಾಗೂ ಸುತ್ತಮುತ್ತಲಿನ ನದಿ ಪಾತ್ರದಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ರಾತ್ರಿ ಮಾತ್ರವಲ್ಲದೆ ಹಗಲಿನಲ್ಲಿಯೂ ಮರಳು ಸಾಗಾಟ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಕುರಿತು ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಚಟುವಟಿಕೆ ಮುಂದುವರಿದಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಕ್ರಮ ಮರಳುಗಾರಿಕೆ ಮೇಲೆ ನಿಗಾ ಇರಿಸಿದ್ದರು. ಗುರುವಾರ ಮರಳು ತೆಗೆಯುವ ಹಾಗೂ ಸಾಗಿಸುವ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಮರಳು ತುಂಬಿದ್ದ ವಾಹನವನ್ನು ತಡೆದು, ಅಲ್ಲಿದ್ದವರನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಮರಳು ತುಂಬಿದ್ದ ವಾಹನ ಹಾಗೂ ಸಂಬಂಧಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರಿಂದಲೂ ಘಟನೆಯ ಕುರಿತು ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಲಾಗಿದೆ.

ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ ಗ್ರಾಮಸ್ಥರೇ ಒಗ್ಗೂಡಿ ವಾಹನ ತಡೆದು ಪೊಲೀಸರಿಗೆ ಮಾಹಿತಿ ನೀಡಿರುವುದು ಗಮನ ಸೆಳೆದಿದೆ. ತಾಲೂಕಿನ ವಿವಿಧೆಡೆ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳುಗಾರಿಕೆ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತರಿಗೂ ದೂರು ಸಲ್ಲಿಕೆಯಾಗಿದೆ.

 

Please Share: