ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಹಾಲು ಸಾಗಿಸುತ್ತಿದ್ದ ಟ್ಯಾಂಕರ್ವೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಹೆದ್ದಾರಿಯಲ್ಲೇ ಹಾಲಿನ ಹೊಳೆ ಹರಿದ ಘಟನೆ ತಾಲೂಕಿನ ಆರೋಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಬುಧವಾರ ರಾತ್ರಿ ನಡೆದಿದೆ.

ಹಿರೇಕೆರೂರಿನಿಂದ ಕೇರಳದ ಕಣ್ಣೂರಿಗೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಆರೋಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಪಲ್ಟಿಯಾಗಿದ್ದು, ಅದರ ಮುಚ್ಚಳ ತೆರೆದುಕೊಂಡ ಪರಿಣಾಮ ಟ್ಯಾಂಕರ್ನಲ್ಲಿದ್ದ ಹಾಲು ರಸ್ತೆಯ ಮೇಲೆ ಹರಿದು ಹೋಗಿದೆ.

ಅಪಘಾತದ ವೇಳೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದು ಟ್ಯಾಂಕರ್ನ ಕೆಳಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ. ಟ್ಯಾಂಕರ್ ಚಾಲಕ ಹಾಗೂ ಸಮೀಪದಲ್ಲಿದ್ದ ಸ್ಥಳೀಯರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಇನ್ನು ಟ್ಯಾಂಕರ್ನಿಂದ ಹಾಲು ಹರಿಯುತ್ತಿದ್ದ ದೃಶ್ಯ ಕಂಡ ಸ್ಥಳೀಯರು ಬಕೆಟ್, ಬಾಟಲಿ ಹಾಗೂ ಕ್ಯಾನ್ಗಳನ್ನು ಹಿಡಿದು ಹಾಲು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಕೆಲಕಾಲ ಸ್ಥಳದಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು.
ಡಿಕ್ಕಿಯಿಂದ ವಿದ್ಯುತ್ ಕಂಬ ಮುರಿದ ಪರಿಣಾಮ ಗ್ರಾಮೀಣ ಭಾಗದಲ್ಲಿ ಕೆಲ ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
