ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹೊನ್ನೇಬೈಲ ಗ್ರಾಮದ ಹನಿ ಬೀಚ್‌ನಲ್ಲಿ ಗ್ರೀನ್ ಸೀ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಲತೀರದಲ್ಲಿ ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆಮೆಯ ಮೃತದೇಹವನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೀಫ್ ವಾಚ್ ಸಂಸ್ಥೆಯ ಸಿಬ್ಬಂದಿ ಜಂಟಿಯಾಗಿ ಪರಿಶೀಲನೆ ನಡೆಸಿದರು. ಆಮೆಯ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಲಭ್ಯವಿದ್ದ ಬಾಹ್ಯ ಅಳತೆಗಳನ್ನು ದಾಖಲಿಸಿಕೊಂಡು, ಮೃತದೇಹವನ್ನು ಅದೇ ಸ್ಥಳದಲ್ಲಿ ಗುಂಡಿ ತೆಗೆದು ಮುಚ್ಚಲಾಗಿದೆ.

ಪತ್ತೆಯಾದ ಆಮೆಯ ಒಟ್ಟು ಉದ್ದ 110 ಸೆಂ.ಮೀ., ಚಿಪ್ಪಿನ ಉದ್ದ 89 ಸೆಂ.ಮೀ. ಹಾಗೂ ಚಿಪ್ಪಿನ ಅಗಲ 73 ಸೆಂ.ಮೀ. ಎಂದು ದಾಖಲಿಸಲಾಗಿದೆ. ಆಮೆಯ ಸಾವಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಈ ವೇಳೆ ಕೋಸ್ಟಲ್ ಆ್ಯಂಡ್ ಮೆರೈನ್ ಇಕೋ-ಸಿಸ್ಟಮ್ ಸೆಲ್‌ನ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯಪಾಲಕರು ಹಾಗೂ ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.

