ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಸಾಮಾಜಿಕ ಸೇವೆಯ ಜೊತೆಗೆ ಮೂಕಜೀವಿಗಳ ಸಂಕಷ್ಟಕ್ಕೂ ಸ್ಪಂದಿಸುತ್ತಾ, ತೆರೆಮರೆಯಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಹಟ್ಟಿಕೇರಿಯ ನಿತ್ಯಾನಂದ ಆರ್. ನಾಯ್ಕ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಲೂಕಿನ ಹಟ್ಟಿಕೇರಿ ವ್ಯಾಪ್ತಿ ಪ್ರದೇಶದಲ್ಲಿ ಕಬ್ಬಿಣದ ತಂತಿ (ಟಾರು) ಸುತ್ತಿಕೊಂಡು ಒದ್ದಾಡುತ್ತಿದ್ದ ಕರುವನ್ನು ಗಮನಿಸಿದ ನಿತ್ಯಾನಂದ ನಾಯ್ಕ ಅವರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಜಾಗರೂಕತೆಯಿಂದ ಕರುವನ್ನು ಹಿಡಿದು, ಅದರ ದೇಹಕ್ಕೆ ಸುತ್ತಿಕೊಂಡಿದ್ದ ಟಾರನ್ನು ಬಿಡಿಸುವ ಕಾರ್ಯಕ್ಕೆ ಮಹೇಶ್ ನಾಯ್ಕ ಹಾಗೂ ಪ್ರಮೋದ್ ನಾಯ್ಕ ಸಹಕರಿಸಿದ್ದಾರೆ. ಬಳಿಕ ಕರುವನ್ನು ಟಾರಿನಿಂದ ಮುಕ್ತಗೊಳಿಸಲಾಗಿದೆ.
ಬಿಡಾಡಿ ಜಾನುವಾರುಗಳು ಹಾಗೂ ಇತರೆ ಮೂಕಜೀವಿಗಳು ಸಂಕಷ್ಟಕ್ಕೆ ಸಿಲುಕಿದಾಗ ಸಾಧ್ಯವಾದಷ್ಟು ನೆರವು ನೀಡುವ ನಿತ್ಯಾನಂದ ನಾಯ್ಕ, ಪ್ರಾಣಿಗಳ ಆರೈಕೆಯಲ್ಲಿಯೇ ಸಂತೋಷ ಕಾಣುತ್ತಿದ್ದಾರೆ. ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ತಮ್ಮ ಕೈಲಾದ ಸೇವೆಯನ್ನು ಮುಂದುವರಿಸುತ್ತಿರುವ ಅವರ ಮಾನವೀಯ ಕಾಳಜಿ ಸ್ಥಳೀಯರ ಗಮನ ಸೆಳೆದಿದೆ.
ಜನಸೇವೆಯ ಜೊತೆಗೆ ಮೂಕಜೀವಿಗಳ ನೋವಿಗೂ ಸ್ಪಂದಿಸುವ ನಿತ್ಯಾನಂದ ನಾಯ್ಕ ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

