ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ದೇಶದ ಸ್ವಾತಂತ್ರ್ಯವನ್ನು ಸ್ಮರಿಸುವ ಪವಿತ್ರ ದಿನದಂದೇ ತಾಲೂಕಿನ ಕೊಪ್ಪ ಗ್ರಾಮದಲ್ಲಿ ರಾಷ್ಟ್ರಧ್ವಜವನ್ನು ತಪ್ಪು ಕ್ರಮದಲ್ಲಿ ಹಾರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪ ಗ್ರಾಮದ ಸೊಸೈಟಿ ಗೋಡೌನ್ ಆವರಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದ ಹಸಿರು ಬಣ್ಣ ಮೇಲ್ಭಾಗದಲ್ಲಿದ್ದರೆ, ಕೇಸರಿ ಬಣ್ಣ ಕೆಳಭಾಗದಲ್ಲಿತ್ತು. ಧ್ವಜಾರೋಹಣದ ವೇಳೆ ಕಂಡುಬಂದ ಈ ಎಡವಟ್ಟು ಸ್ಥಳೀಯರ ಗಮನ ಸೆಳೆದಿದ್ದು, ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಾಷ್ಟ್ರಧ್ವಜ ಕೇವಲ ಒಂದು ಬಟ್ಟೆಯ ತುಂಡಲ್ಲ; ಅದು ದೇಶದ ಗೌರವ, ಸ್ವಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತ. ಅಂತಹ ಧ್ವಜವನ್ನು ರಾಷ್ಟ್ರೀಯ ಹಬ್ಬದ ಕಾರ್ಯಕ್ರಮದಲ್ಲೇ ತಪ್ಪಾಗಿ ಹಾರಿಸಿರುವುದು ಆಯೋಜಕರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧ್ವಜಾರೋಹಣಕ್ಕೂ ಮುನ್ನ ಅದರ ಸರಿಯಾದ ಕ್ರಮವನ್ನು ಪರಿಶೀಲಿಸುವ ಕನಿಷ್ಠ ಎಚ್ಚರಿಕೆಯೂ ಇರಲಿಲ್ಲವೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಿ, ಯಾರ ನಿರ್ಲಕ್ಷ್ಯದಿಂದ ಈ ಪ್ರಮಾದ ಸಂಭವಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಲ್ಲಿ ಇಂತಹ ಪ್ರಮಾದಗಳಿಗೆ ಅವಕಾಶವಾಗದಂತೆ ಆಯೋಜಕರು ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ ಧ್ವಜ ಸಂಹಿತೆಯ ಬಗ್ಗೆ ಕಟ್ಟುನಿಟ್ಟಿನ ಅರಿವು ಮೂಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
