ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಷ್ಟಪಟ್ಟು ಕಟ್ಟಿಕೊಂಡಿದ್ದ ಮನೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ, ಬದುಕಿನ ಅಗತ್ಯ ವಸ್ತುಗಳನ್ನೆಲ್ಲ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಜೋಯಿಡಾ ತಾಲೂಕಿನ ಸುಳಗೇರಿ ಗ್ರಾಮದ ಬಡ ಕುಟುಂಬಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉತ್ತರ ಕನ್ನಡ ಜಿಲ್ಲಾ ಶಾಖೆ ನೆರವಿನ ಹಸ್ತ ಚಾಚಿದೆ.
ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಗೇರಿಯಲ್ಲಿ ದೀಪಕ ನಾಯ್ಕ ಅವರ ಮನೆಗೆ ಬೆಂಕಿ ತಗುಲಿ ಸುಟ್ಟುಹೋಗಿತ್ತು. ಬೆಂಕಿ ಅವಘಡದಿಂದ ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ಸೇರಿದಂತೆ ಕುಟುಂಬದ ಅಗತ್ಯ ಸಾಮಗ್ರಿಗಳು ನಾಶವಾಗಿದ್ದವು. ಘಟನೆಯ ಬಳಿಕ ಕುಟುಂಬವು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉತ್ತರ ಕನ್ನಡ ಜಿಲ್ಲಾ ಶಾಖೆಯು ಅಗತ್ಯ ಪರಿಹಾರ ಸಾಮಗ್ರಿಗಳನ್ನು ಒದಗಿಸಿತು. ಕಾರವಾರದ ಡಿಎಚ್ಒ ಕಚೇರಿ ಆವರಣದಲ್ಲಿರುವ ರೆಡ್ ಕ್ರಾಸ್ ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಸಂತ್ರಸ್ತ ದೀಪಕ ನಾಯ್ಕ ಅವರ ಪತ್ನಿ ಶಿಲ್ಪಾ ನಾಯ್ಕ ಅವರಿಗೆ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಅಡುಗೆ ಪಾತ್ರೆಗಳ ಸೆಟ್, ಎರಡು ಕಂಬಳಿ, ಎರಡು ರಗ್, ಎರಡು ಸೊಳ್ಳೆ ಪರದೆ, ಒಂದು ಪ್ಯಾಕೆಟ್ ಸೊಳ್ಳೆ ಬತ್ತಿ ಹಾಗೂ ಒಂದು ತಾಡಪತ್ರಿ ಸೇರಿದಂತೆ ಸುಮಾರು ₹10 ಸಾವಿರ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ನೀಡಲಾಯಿತು.
ಮನೆ ಕಳೆದುಕೊಂಡ ಕುಟುಂಬಕ್ಕೆ ಅಗತ್ಯ ವಸ್ತುಗಳು ದೊರೆತಿರುವುದು ಬೆಂಕಿ ಅವಘಡದ ಬಳಿಕದ ಸಂಕಷ್ಟದ ಸಮಯದಲ್ಲಿ ಕೊಂಚ ನೆಮ್ಮದಿ ತಂದಿದೆ. ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೆ ಸ್ಪಂದಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆ ಮೆರೆದಿದೆ.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತರ ಕನ್ನಡ ಜಿಲ್ಲಾ ಶಾಖೆಯ ಚೇರ್ಮನ್ ವಿ.ಎಂ. ಹೆಗಡೆ, ಜೂನಿಯರ್ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಆರ್.ಎಸ್. ನಾಯ್ಕ ಹಾಗೂ ಸಂದೀಪ ರೇವಣಕರ ಉಪಸ್ಥಿತರಿದ್ದರು.

