ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ಪಟ್ಟಣದ ಬ್ಯಾಂಕ್‌ನಲ್ಲಿ ಚಿನ್ನದ ಸರ ಅಡವಿಟ್ಟು ಸಾಲ ಪಡೆದ ಹಣದೊಂದಿಗೆ ತೆರಳುತ್ತಿದ್ದ ರೈತನನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ದು ಬೆದರಿಸಿ ₹3,500 ನಗದು ಬಲವಂತವಾಗಿ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Banner Ad

ತಾಲೂಕಿನ ದುಗ್ಗೂರು, ವಂದೂರು ನಿವಾಸಿ ರೈತ ಶಂಕರ ವಿಠೋಬ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಮಂಕಿ ನಿವಾಸಿ ನಾಗರಾಜ ಶಂಕರ ನಾಯ್ಕನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್‌ಸೈಕಲ್‌ನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶಂಕರ ನಾಯ್ಕ ಅವರು ಹೊನ್ನಾವರ ಪಟ್ಟಣದ ಬ್ಯಾಂಕ್‌ವೊಂದರಲ್ಲಿ ಚಿನ್ನದ ಸರ ಅಡವಿಟ್ಟು ₹1.50 ಲಕ್ಷ ಸಾಲ ಪಡೆದಿದ್ದರು. ಈ ಪೈಕಿ ₹3,500ನ್ನು ಶರ್ಟ್‌ ಜೇಬಿನಲ್ಲಿಟ್ಟುಕೊಂಡು, ಉಳಿದ ₹1,46,500ನ್ನು ಕೈಚೀಲದಲ್ಲಿಟ್ಟುಕೊಂಡಿದ್ದರು. ಬ್ಯಾಂಕ್‌ನಿಂದ ಹೊರಬಂದು ರಸ್ತೆಗಿಳಿದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಪರಿಚಯಸ್ಥನಂತೆ ಮಾತನಾಡಿಸಿ ಅವರನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.

ಮಾರ್ಗಮಧ್ಯೆ ಹಣ ನೀಡುವಂತೆ ಒತ್ತಾಯಿಸಿದ ಆರೋಪಿ, ಹಣ ಕೊಡದಿದ್ದರೆ ಬೈಕ್‌ನಿಂದ ಕೆಳಕ್ಕೆ ದೂಡಿ ಕೊಲ್ಲುವುದಾಗಿ ಬೆದರಿಸಿದ್ದಾನೆ. ಶಂಕರ ಅವರು ಬೈಕ್ ನಿಲ್ಲಿಸುವಂತೆ ಮನವಿ ಮಾಡಿದರೂ ನಿಲ್ಲಿಸದೆ ಟೆಲಿಫೋನ್ ಕಚೇರಿ ಸಮೀಪಕ್ಕೆ ಕರೆದೊಯ್ದು, ಅವರ ಶರ್ಟ್ ಜೇಬಿನಲ್ಲಿದ್ದ ₹3,500ನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತ್ವರಿತ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

 

 

Please Share: