ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ತಾಲೂಕಿನ ಮೂಲಂಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಕುರಿಯೊಂದರ ಮೇಲೆ ದಾಳಿ ನಡೆಸಿ, ಅದನ್ನು ಕಚ್ಚಿ ದೇಹಕ್ಕೆ ಸುತ್ತಿಕೊಂಡಿದ್ದ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ಅರಣ್ಯ ಇಲಾಖೆ ಹಾಗೂ ಉರಗ ರಕ್ಷಕರು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಗ್ರಾಮದಲ್ಲಿ ಕುರಿಯೊಂದನ್ನು ಕಚ್ಚಿ ಸುತ್ತಿಕೊಂಡಿದ್ದ ಹೆಬ್ಬಾವು ಅದನ್ನು ನುಂಗಲು ಮುಂದಾಗಿತ್ತು. ಹೆಬ್ಬಾವಿನ ದಾಳಿಗೆ ಕುರಿ ಮೃತಪಟ್ಟಿದ್ದು, ಘಟನೆಯನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಹಾಗೂ ಉರಗ ರಕ್ಷಕರು ಸ್ಥಳಕ್ಕೆ ಧಾವಿಸಿದರು. ಉರಗ ತಜ್ಞ ರಾಜಕ್ ಶಾ ಅವರ ಶಿಷ್ಯ ಮಲಿಕ್ ರಿಹಾನ್ ಅವರು ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದರು. ಬಳಿಕ ಹೆಬ್ಬಾವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಅರಣ್ಯಾಧಿಕಾರಿ ಜಗದೀಶ್, ಪಾರ್ಕ್ ಗಾರ್ಡ್ ದೀಪಕ್ ಸೇರಿದಂತೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು. ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಗ್ರಾಮಸ್ಥರು ವೀಕ್ಷಿಸಿದರು.
