ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ತಾಲೂಕಿನ ನಂದಿಗಟ್ಟಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕಂದಾಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಸುಮಾರು 3 ಕ್ವಿಂಟಲ್ 22 ಕೆಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Banner Ad

ಪ್ರಕರಣದಲ್ಲಿ ಕಲಘಟಗಿ ತಾಲೂಕಿನ ಯಲ್ಲಪ್ಪ ಬಂಡಿ ಎಂಬಾತನ ವಿರುದ್ಧ ದೂರು ದಾಖಲಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಸಂಜಯಕುಮಾರ, ಕಂದಾಯ ನಿರೀಕ್ಷಕ ಪುನೀತ್ ಕುಮಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಸುರೀನ್ ನೇತೃತ್ವದ ತಂಡ ನಂದಿಗಟ್ಟಿ ಗ್ರಾಮದಲ್ಲಿ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಕ್ಕಿಯನ್ನು ವಾಹನ ಸಮೇತ ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯ ಬಳಿಕ ಮುಂಡಗೋಡ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಹೊರ ಜಿಲ್ಲೆಗಳಿಗೆ ಸಾಗಿಸುವ ಜಾಲ ಸಕ್ರಿಯವಾಗಿರುವ ಬಗ್ಗೆ ಸ್ಥಳೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಸಂಬಂಧಪಟ್ಟ ಇಲಾಖೆ ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 

Please Share: