ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಆ.7: ರಾಜ್ಯ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳು ವೈದ್ಯರಿಗೆ ಸ್ಥಾನ ನೀಡದೇ ಮೀನುಗಾರ ಸಮುದಾಯ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೀನುಗಾರ ಸಮುದಾಯದಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಮೀನುಗಾರ ಮುಖಂಡ ಜೈವಿಠಲ್ ಕುಬಾಳ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮೀನುಗಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಾತಿವಾರು ಸಮೀಕರಣದ ಆಧಾರದ ಮೇಲೆ ಸಚಿವ ಸಂಪುಟ ರಚನೆಯಾಗಿದ್ದರೂ ಮೀನುಗಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ಸಮುದಾಯ ಹಾಗೂ ಜಿಲ್ಲೆಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು.
ಮಂಕಾಳು ವೈದ್ಯರ ಹೆಸರು ಆರಂಭದಲ್ಲಿ ಸಚಿವರ ಪಟ್ಟಿಯಲ್ಲಿದ್ದು, ಬಳಿಕ ಕೈಬಿಡಲಾಗಿದೆ. “ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಂಡಂತಾಗಿದೆ. ಹೆಸರು ಸೇರಿಸಿ ನಂತರ ಕೈಬಿಟ್ಟಿರುವುದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಸರ್ಕಾರ ಕೂಡಲೇ ಈ ತಪ್ಪು ಸರಿಪಡಿಸಬೇಕು” ಎಂದು ಅವರು ಆಗ್ರಹಿಸಿದರು.
ಜಗದೀಶ ಹರಿಕಾಂತ ಮಾತನಾಡಿ, ಬಡ ಮೀನುಗಾರ ಕುಟುಂಬದಿಂದ ಬೆಳೆದ ಮಂಕಾಳು ವೈದ್ಯರು ಶಾಸಕ ಹಾಗೂ ಸಚಿವರಾಗಿ ಎಲ್ಲ ವರ್ಗದ ಜನರಿಗೆ ಸ್ಪಂದಿಸಿದ ಸರಳ ವ್ಯಕ್ತಿ. ಜನತಾ ದರ್ಶನಗಳ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಮೀನುಗಾರ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದ್ದು, ಸರ್ಕಾರ ಪುನರ್ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜು ಹರಿಕಾಂತ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನ ನಾಲ್ವರು ಶಾಸಕರು ಆಯ್ಕೆಯಾಗಿದ್ದರೂ ಜಿಲ್ಲೆಗೆ ಸಚಿವ ಸ್ಥಾನ ನೀಡಿಲ್ಲ. ಬೇರೆ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ನಲ್ಲಿ ಇದೇ ಮೊದಲ ಬಾರಿಯಾಗಿದ್ದು, ಕನಿಷ್ಠ ಜಿಲ್ಲೆಯ ನಾಲ್ವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಹೇಳಿದರು.
ಬಾಬು ಕುಬಾಳ ಮಾತನಾಡಿ, ಮೀನುಗಾರಿಕೆ ಸಚಿವರಾಗಿದ್ದ ವೇಳೆ ಮಂಕಾಳು ವೈದ್ಯರು ವಿಮೆ, ಸೀಮೆಎಣ್ಣೆ, ಡೀಸೆಲ್ ಸೇರಿದಂತೆ ಮೀನುಗಾರರ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದರು. ಮೀನುಗಾರಿಕೆ ವೇಳೆ ಮೃತಪಟ್ಟವರಿಗೆ ನೀಡುವ ಪರಿಹಾರವನ್ನು ₹10 ಲಕ್ಷಕ್ಕೆ ಹೆಚ್ಚಿಸುವಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಇಂತಹ ನಾಯಕನಿಗೆ ಸಚಿವ ಸ್ಥಾನ ನಿರಾಕರಿಸಿರುವುದನ್ನು ಕರಾವಳಿ ಭಾಗದ ಮೀನುಗಾರರು ಪಕ್ಷಾತೀತವಾಗಿ ಖಂಡಿಸುತ್ತಿದ್ದು, ಸರ್ಕಾರ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಹರಿಕಾಂತ, ಮಹಾಬಲೇಶ್ವರ ಅಂಬಿಗ, ಗಣೇಶ ಅಂಬಿಗ, ಗಂಗಾಧರ ಅಂಬಿಗ, ಚಿದಾನಂದ ಲಕ್ಕುಮನೆ, ಬೀರಪ್ಪ ಹರಿಕಾಂತ, ವೆಂಕಟರಮಣ ಮೊಗೇರ, ಯಾದವ ಮೊಗೇರ, ಕೇಶವ ಮೊಗೇರ, ಗೋಪಾಲ ಮೊಗೇರ, ಈಶ್ವರ ಮೊಗೇರ, ಗೋವರ್ಧನ ಮೊಗೇರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
