ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವಾರಂಟ್ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ಮತ್ತೆ ವಶಕ್ಕೆ ಪಡೆದ ಘಟನೆ ಶಿರಸಿಯ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

ಬನವಾಸಿ ಪೊಲೀಸ್ ಠಾಣೆಯ ಸಿಎಚ್‌ಸಿ ಅಬ್ದುಲ್ ಸಯೀದ್ ಹುಸೇನ್ ಸೈಯ್ಯದ (48) ಅವರು ನೀಡಿದ ದೂರಿನ ಮೇರೆಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಸ್ವಾಮೇಲ್ ಅಲಿಯಾಸ್ ಸುನೀಲ್ (24), ಬದನಗೋಡ-ದಾಸನಕೊಪ್ಪ ನಿವಾಸಿ, ಎಂಬ ವಾರಂಟ್ ಆರೋಪಿಯನ್ನು ಬನವಾಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಜುಲೈ 14ರಿಂದ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಮುನ್ನ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತಂದ ವೇಳೆ, ಬಂಧನದ ಆದೇಶ ತಿಳಿಯುತ್ತಿದ್ದಂತೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸಿಎಚ್‌ಸಿ ಅಬ್ದುಲ್ ಸಯೀದ್ ಅವರನ್ನು ಎದೆಗೆ ತಳ್ಳಿ ನೆಲಕ್ಕೆ ಬೀಳಿಸಿ, ಎಡ ಮಂಡಿಗೆ ಕಾಲಿನಿಂದ ಒದ್ದು ಓಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆತನನ್ನು ಹಿಡಿಯಲು ಬೆನ್ನಟ್ಟಿದ ಸಿಪಿಸಿ 1041 ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿ, ಎದೆಗೆ ಹೊಡೆದು ದೂಡಿ ಆರೋಪಿಯು ಪರಾರಿಯಾಗಿದ್ದಾನೆ ಎಂದು ತಿಳಿಸಲಾಗಿದೆ.

ಘಟನೆಯ ಮಾಹಿತಿ ಪಡೆದ ಬನವಾಸಿ ಪಿಎಸ್‌ಐ ಅವರು ಹೊಸ ಮಾರುಕಟ್ಟೆ, ಶಹರ ಹಾಗೂ ಸಂಚಾರ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದು, ಎಲ್ಲಾ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ತೋಟಗಾರ್ಸ್ ಬಾಯ್ಸ್ ಹಾಸ್ಟೆಲ್ ಸಮೀಪದ ಗಿಡಗಂಟಿಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಮತ್ತೆ ವಶಕ್ಕೆ ಪಡೆದಿದ್ದಾರೆ.

ಆರೋಪಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಾನೂನುಬದ್ಧ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಡಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

Please Share: