ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ ಜೂ. 29: ಮುರಿನ್ ಕಟ್ಟೆ ಧ್ವಂಸ ವಿವಾದದ ಬಳಿಕ ಭಟ್ಕಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಮತ್ತಷ್ಟು ಬಿಗಿಗೊಳಿಸಿದೆ. ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಭಟ್ಕಳ ತಹಶೀಲ್ದಾರ್ ಹಾಗೂ ಶಹರ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಗುಪ್ತಚರ ಇಲಾಖೆಯ ಮಾಹಿತಿ ಹಾಗೂ ಪೊಲೀಸ್ ವರದಿ ಆಧರಿಸಿ ಭಟ್ಕಳ ತಹಶೀಲ್ದಾರ್ ಪ್ರವೀಣ್ ಕರಾಂಡೆ ಅವರು ಒಟ್ಟು 60 ರೌಡಿಶೀಟರ್‌ಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಇವರಲ್ಲಿ 40 ಮಂದಿ ಮುಸ್ಲಿಂ ಹಾಗೂ 20 ಮಂದಿ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗಣೇಶೋತ್ಸವ, ಈದ್ ಮಿಲಾದ್ ಸೇರಿದಂತೆ ಮುಂಬರುವ ಹಬ್ಬಗಳ ವೇಳೆ ಯಾವುದೇ ರೀತಿಯ ಕೋಮು ಗಲಭೆ, ಅಶಾಂತಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಹಾಗೂ ಸಮಾಜದಲ್ಲಿ ದುರ್ವರ್ತನೆ ತೋರುವುದಿಲ್ಲ ಎಂದು ತಲಾ 50 ಸಾವಿರ ರೂ. ಮೊತ್ತದ ಮುಚ್ಚಳಿಕೆ ಬಾಂಡ್‌ನ್ನು ಬರೆದುಕೊಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 129ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ನೋಟಿಸ್‌ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, “ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಮುಚ್ಚಳಿಕೆ ಬಾಂಡ್ ಏಕೆ ಪಡೆದುಕೊಳ್ಳಬಾರದು?” ಎಂಬ ಬಗ್ಗೆ ವಿಚಾರಣೆ ನಡೆಸಲು ತಹಶೀಲ್ದಾರ್ ನಿರ್ಧರಿಸಿದ್ದಾರೆ. ನೋಟಿಸ್ ಪಡೆದವರು ಹಾಗೂ ಆಕ್ಷೇಪ ಸಲ್ಲಿಸಿದವರು ನಿಗದಿತ ದಿನ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ಜಿಲ್ಲಾಡಳಿತವು ಮುಂಬರುವ ಹಬ್ಬಗಳು ಶಾಂತಿಯುತವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
