ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಕಳೆದ ಮೇ ತಿಂಗಳಿನಿಂದ ನಾಪತ್ತೆಯಾಗಿರುವ ಘಟನೆ ಶಿರಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಅವರ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.

Banner Ad

ಹೊನ್ನಾವರ ತಾಲೂಕಿನ ಮಡಿ-ಮಂಕಿ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಶಿರಸಿಯ ಗಣೇಶನಗರದಲ್ಲಿ ವಾಸವಾಗಿದ್ದ ವೆಂಕಟೇಶ ಗೋಪಾಲ ನಾಯ್ಕ (36) ನಾಪತ್ತೆಯಾಗಿರುವ ವ್ಯಕ್ತಿ. ಮೇ 26ರಂದು ಬೆಳಿಗ್ಗೆ ಮನೆಯಿಂದ ಹೊರಟು ಹೋದ ಅವರು ಬಳಿಕ ಮರಳಿ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಶಕುಂತಲಾ ಅವರು ಶಿರಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ವೆಂಕಟೇಶ ನಾಯ್ಕ ಅವರು ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುಟುಂಬದಲ್ಲಿ ನಡೆದ ವೈಯಕ್ತಿಕ ದುಃಖದ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಅವರು ಕಳೆದ ಎರಡು ವರ್ಷಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.

ಮೇ 26ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6.30 ಗಂಟೆಯ ಅವಧಿಯಲ್ಲಿ ಗಣೇಶನಗರದ ಬಾಡಿಗೆ ಮನೆಯಿಂದ ಹೊರಟು ಹೋದ ಅವರು ನಂತರ ಎಲ್ಲಿಯೂ ಪತ್ತೆಯಾಗಿಲ್ಲ. ನಾಪತ್ತೆಯಾದ ವೇಳೆ ಅವರು ಕೆಂಪು ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕಂದು ಬಣ್ಣದ ಬ್ಯಾಗ್ ಹೊಂದಿದ್ದರು ಎಂದು ತಿಳಿದುಬಂದಿದೆ.

ವೆಂಕಟೇಶ ಅವರು ಸುಮಾರು 36 ವರ್ಷದವರಾಗಿದ್ದು, ಗೋಧಿ ಮೈಬಣ್ಣ ಹಾಗೂ ದುಂಡನೆಯ ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡಬಲ್ಲರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಶಿರಸಿ ನಗರ ಪೊಲೀಸ್ ಠಾಣೆ (08384-226333 / 9480805264) ಅಥವಾ ಶಿರಸಿ ವೃತ್ತ ನಿರೀಕ್ಷಕರ ಕಚೇರಿ (08384-226260)ಗೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳ ಪತ್ತೆಗೆ ಸಾರ್ವಜನಿಕರ ಮಾಹಿತಿ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Please Share: