ಕುಮಟಾ: ತಾಲೂಕಿನ ಗೋಕರ್ಣದ ದುಬ್ಬನಶಶಿ ಕಡಲ ತೀರದಲ್ಲಿ ಸೋಮವಾರ ಮುಂಜಾನೆ ಅಪರಿಚಿತ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಕರಾವಳಿ ಕಾವಲು ಪೊಲೀಸ್ ಪಡೆ ಸಿಬ್ಬಂದಿಗಳು ದಡಕ್ಕೆ ತೇಲಿ ಬಂದ ಮೃತದೇಹವನ್ನು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಆರೋಗ್ಯ ಕೇಂದ್ರಕ್ಕೆ ರವಾನಿಸಿದರು.

ರವಿವಾರ ಸಂಜೆ ರಾಮತೀರ್ಥ ಬಳಿ ಒಂದು ಬ್ಯಾಗ್ ಸಿಕ್ಕಿದ್ದು, ಅದನ್ನು ಮೃತನದೇ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಇನ್ನೂ ವಾರಸುದಾರರು ದೃಢಪಡಿಸಿಲ್ಲ.

ಮೃತನ ಬಟ್ಟೆಯ ಜೇಬಿನಲ್ಲಿ ಪಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದೆ. ಎರಡೂ ದಾಖಲೆಗಳು ಹನುಮಂತ ಎಂ ಎಂಬುವರ ಹೆಸರಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ದಾಖಲೆಗಳಲ್ಲಿ ಉಲ್ಲೇಖಿಸಿರುವ ಕುಟುಂಬದವರನ್ನು ಸಂಪರ್ಕಿಸಿದ್ದು, ಅವರು ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

 

Please Share: