ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ಪಟ್ಟಣದಲ್ಲಿ ನಡೆದ ಮೀಟರ್ ಬಡ್ಡಿ ದಂಧೆ ಕಿಂಗ್‌ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣವನ್ನು ಪೊಲೀಸರು ಬಿಚ್ಚಿಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Banner Ad

ಪೊಲೀಸ್ ತನಿಖೆ ಪ್ರಕಾರ, ಈ ಕೊಲೆ ಪ್ರಕರಣಕ್ಕೆ ಮುಂಡಗೋಡ ಮೂಲದ ಕಾಜಗಾರ ಮಂಜುನಾಥ್ ಅಲಿಯಾಸ್ ಮಂಜ್ಯಾ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಮಂಜುನಾಥ್ ಈಗಾಗಲೇ ನಾಲ್ಕು ವರ್ಷಗಳ ಹಿಂದೆ ನಡೆದ ಹರ್ಷ ಕೊಲೆ ಪ್ರಕರಣದಲ್ಲೂ ಆರೋಪಿ ಆಗಿದ್ದಾನೆ ಎಂದು ತಿಳಿದುಬಂದಿದೆ.

ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಮಂಜುನಾಥ್ ಮತ್ತು ಜಮೀರ್ ನಡುವೆ ವ್ಯವಹಾರ ಸಂಬಂಧಿತ ವೈಮನಸ್ಸು ಉಂಟಾಗಿತ್ತು. ಜಮೀರ್, ಮಂಜುನಾಥ್ ಜೊತೆ ಕೆಲಸ ಮಾಡುತ್ತಿದ್ದ ಕೆಲ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದರಿಂದ ಇಬ್ಬರ ನಡುವಿನ ಗಲಾಟೆ ತೀವ್ರಗೊಂಡಿತ್ತು ಎನ್ನಲಾಗಿದೆ. ಜೊತೆಗೆ, ಜಮೀರ್ ನೀಡುತ್ತಿದ್ದ ಕಿರುಕುಳದಿಂದ ಮಂಜುನಾಥ್ ಮುಂಡಗೋಡವನ್ನು ಬಿಟ್ಟು ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದನು.

ಇದೇ ವೇಳೆ, ಜಮೀರ್ ಸುಮಾರು 300ಕ್ಕೂ ಹೆಚ್ಚು ಜನರ ಮೇಲೆ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಿದ್ದುದರಿಂದ ಮಂಜುನಾಥ್‌ಗೆ ಅಸಮಾಧಾನ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಬಂಧಿಸಿರುವ ಪೊಲೀಸರು, ಮುಂದಿನ ತನಿಖೆ ಮುಂದುವರೆಸಿದ್ದಾರೆ.

 

Please Share: