ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನ್ಯಾಯಾಂಗದ ಆದೇಶಗಳನ್ನು ಲೆಕ್ಕಿಸದೆ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಕಾರವಾರ ನಗರ ಪೊಲೀಸರು ಕೊನೆಗೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

Banner Ad

158/2022ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ವಂಚನೆ ಆರೋಪ ಎದುರಿಸುತ್ತಿದ್ದ ಅಂಕೋಲಾ ತಾಲೂಕಿನ ಅಲಗೇರಿ ನಿವಾಸಿ ವಿಕ್ರಂ ಎನ್. ಪಂತ ವಿರುದ್ಧ ಮಾನ್ಯ ಸಿವಿಲ್ ಜಡ್ಜ್ ಹಾಗೂ ಸಿಜೆಎಮ್ ನ್ಯಾಯಾಲಯ, ಕಾರವಾರದಿಂದ ಕ್ರಮವಾಗಿ ನಾಲ್ಕು ನಾನ್-ಬೆಲಬಲ್ ವಾರಂಟ್‌ಗಳು, ಐದು ಪ್ರೋಕ್ಲಮೇಷನ್ ವಾರಂಟ್‌ಗಳು ಮತ್ತು ಒಂದು ಅಟ್ಯಾಚ್ಮೆಂಟ್ ಆದೇಶ ಹೊರಡಿಸಲಾಗಿತ್ತು. ಆದಾಗ್ಯೂ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಆರೋಪಿತನು ದೀರ್ಘಕಾಲದಿಂದ ಹಾಜರಾಗದೇ ತಪ್ಪಿಸಿಕೊಂಡಿದ್ದನು.

ನಾಲ್ಕು ವರ್ಷಗಳಿಂದ ಪತ್ತೆಯಾಗದೇ ಇದ್ದ ಈತನ ಚಟುವಟಿಕೆಗಳ ಬಗ್ಗೆ ಇತ್ತೀಚೆಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ್ದು, ಅದರ ಆಧಾರದ ಮೇಲೆ ಏಪ್ರಿಲ್ 8 ರಂದು ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸಲಾಯಿತು. ಬಳಿಕ, ಕಾನೂನು ಕ್ರಮ ಅನುಸರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕಾರವಾರ ನಗರ ಪೊಲೀಸ್ ಠಾಣೆಯ ಸಿಪಿಸಿ-696 ಗುರು ನಾಯಕ್ ಅವರ ಕರ್ತವ್ಯನಿಷ್ಠೆ ಮೆಚ್ಚುಗೆಗೆ ಪಾತ್ರವಾಗಿದೆ. ಅಧಿಕಾರಿಗಳು ಅವರ ಸೇವೆಯನ್ನು ಪ್ರಶಂಸಿಸಿದ್ದಾರೆ.

ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕಾನೂನು ಕ್ರಮಗಳು ಕಠಿಣವಾಗಿರುವುದನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

Please Share: