ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಕೊಲೆ ಪ್ರಕರಣದ ಆರೋಪಿಗೆ ಸಂಬಂಧಿಸಿದ ಕೂಲಿ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಲಂಚ ಬೇಡಿಕೆ ಮಾಡಿದ ಆರೋಪದ ಹಿನ್ನೆಲೆ ಹಳಿಯಾಳದ ಉಪ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈಲರ್ ಕಲ್ಲಪ್ಪ ಗಸ್ತಿ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪದ ಪ್ರಕಾರ, ಸಂಬಂಧಿತ ಕೈದಿಯ ಕೂಲಿ ಹಣ ಬಿಡುಗಡೆ ಮಾಡಲು ಜೈಲರ್ ₹50 ಸಾವಿರ ಲಂಚ ಕೇಳಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸುಮಾರು ಒಂದು ತಿಂಗಳ ಹಿಂದೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ತನಿಖೆ ಮುಂದುವರಿದಿತ್ತು.
ಗುರುವಾರ ಮುಂಜಾನೆ ಲೋಕಾಯುಕ್ತ ತಂಡ ಉಪ ಕಾರಾಗೃಹದ ಮೇಲೆ ದಾಳಿ ನಡೆಸಿ, ಸುಮಾರು ಏಳು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿತು. ಈ ವೇಳೆ ಜೈಲರ್ ಬಳಿಯಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು, ಧ್ವನಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ತನಿಖೆಯ ವೇಳೆ ಡಿಜಿಟಲ್ ಸಾಕ್ಷ್ಯಾಧಾರಗಳು ಮಹತ್ವದ ಪಾತ್ರ ವಹಿಸಿದ್ದು, ಫೋನ್ ಪೇ ಮೂಲಕ ₹10 ಸಾವಿರ ಹಣ ವರ್ಗಾವಣೆಗೊಂಡಿರುವ ಸುಳಿವು ಕೂಡ ಪತ್ತೆಯಾಗಿದೆ. ಇದರಿಂದ ಲಂಚ ಬೇಡಿಕೆ ಆರೋಪಕ್ಕೆ ತಾಂತ್ರಿಕ ಬೆಂಬಲ ದೊರೆತಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಧಾರವಾಡ ಮೂಲದ ಒಬ್ಬ ನ್ಯಾಯವಾದಿಯ ಪಾತ್ರದ ಕುರಿತು ಸಹ ಅನುಮಾನ ವ್ಯಕ್ತವಾಗಿದ್ದು, ಈ ಸಂಪರ್ಕದಲ್ಲಿ ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
ಪ್ರಕರಣದ ಕುರಿತಂತೆ ಇನ್ನಷ್ಟು ದಾಖಲೆ ಸಂಗ್ರಹಿಸಲು ಲೋಕಾಯುಕ್ತರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಸದ್ಯಕ್ಕೆ ಜೈಲರ್ ಬಂಧನವಾಗಿಲ್ಲದಿದ್ದರೂ, ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು ಮುಂದಿನ ಕ್ರಮಗಳತ್ತ ಗಮನ ಹರಿಸಲಾಗಿದೆ.
ಈ ಘಟನೆ, ಕೈದಿಗಳ ಕೂಲಿ ಹಣ ಬಿಡುಗಡೆ ಪ್ರಕ್ರಿಯೆಯಲ್ಲೇ ಲಂಚ ಬೇಡಿಕೆ ನಡೆದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ.

