ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮಡಗಾವ್‌ನಿಂದ ಕುಮಟಾ ಕಡೆಗೆ ಕೇರಳ ರಾಜ್ಯಕ್ಕೆ ಸಾಗುತ್ತಿದ್ದ ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಾರಸುದಾರರಿಲ್ಲದ ಮದ್ಯವನ್ನು ಅಬಕಾರಿ ಇಲಾಖೆ ಬುಧವಾರ ವಶಕ್ಕೆ ಪಡೆದುಕೊಂಡಿದೆ.
ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಹಿನ್ನಲೆಯಲ್ಲಿ ಅಕ್ರಮ ಮದ್ಯ ಸಾಗಾಟವನ್ನು ತಡೆಯುವ ಉದ್ದೇಶದಿಂದ ಅಬಕಾರಿ ಇಲಾಖೆ ಕಡ್ಡಾಯ ತಪಾಸಣೆ ನಡೆಸಿತು. ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಅವರ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರು, ಕಾರವಾರ ಅವರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕರು, ಉಪವಿಭಾಗ ಕಾರವಾರ ಅವರ ನೇತೃತ್ವದಲ್ಲಿ ಅಂಕೋಲಾ ವಲಯ, ಕಾರವಾರ ವಲಯ ಹಾಗೂ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಸೇರಿ ಕಾರ್ಯಾಚರಣೆ ನಡೆಸಿದರು.
ತಪಾಸಣೆಯ ವೇಳೆ ರೈಲಿನ ಜನರಲ್ ಬೋಗಿಯಲ್ಲಿ ಅನುಮಾನಾಸ್ಪದವಾಗಿ ಇರಿಸಲಾದ ಒಂದು ಬ್ಯಾಗ್ ಪತ್ತೆಯಾಯಿತು. ಪರಿಶೀಲಿಸಿದಾಗ ಅದರೊಳಗೆ 500 ಮಿಲಿಲೀಟರ್ ಸಾಮರ್ಥ್ಯದ 24 ಕಿಂಗ್ಫಿಶರ್ ಪ್ರೀಮಿಯಂ ಬಿಯರ್ ಕ್ಯಾನ್‌ಗಳು ಕಂಡುಬಂದವು. ಬ್ಯಾಗ್‌ಗೆ ಯಾವುದೇ ವಾರಸುದಾರರು ಪತ್ತೆಯಾಗಿಲ್ಲದ ಹಿನ್ನೆಲೆಯಲ್ಲಿ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯವೆಂದು ಶಂಕಿಸಿ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಅಬಕಾರಿ ಉಪನಿರೀಕ್ಷಕರು, ಜಿಲ್ಲಾ ತಂಡ ಕಾರವಾರ ಪ್ರಕರಣ ದಾಖಲಿಸಿಕೊಂಡಿದ್ದು, ಮದ್ಯ ಸಾಗಾಟದ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಇದೇ ವೇಳೆ ಅಂಕೋಲಾ ವಲಯದ ಬೇಲಿಕೇರಿ ಟೋಲ್ ನಾಕಾ ಸಮೀಪ ರಸ್ತೆಗಾವಲು ನಡೆಸಲಾಗಿದ್ದು, ಯಾವುದೇ ಅಬಕಾರಿ ಅಕ್ರಮಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

