ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸ್ನೇಹಿತರ ನಡುವೆ ಉಂಟಾದ ವಾಗ್ವಾದವು ಹಲ್ಲೆಗೆ ತಿರುಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಅಳ್ವೇವಾಡ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಳ್ವೇವಾಡ ಕೋಡಿಬಾಗ ನಿವಾಸಿ ಗೀತೇಶ ಪ್ರೇಮಾನಂದ ಕಲ್ಗುಟ್ಕರ್ (28) ಅವರು ನೀಡಿದ ದೂರಿನ ಮೇರೆಗೆ ವೈಭವ್ ತಾಮ್ಸೆ, ಕಿಶನ್ ಕಲ್ಗುಟ್ಕರ್, ಆದೇಶ್ ಹಾಗೂ ಶಿವನಾಥ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಮಾ. 22ರಂದು ರಾತ್ರಿ 10:30ರ ಸುಮಾರಿಗೆ ಅಳ್ವೇವಾಡ ಜಟ್ಟಿ ಸಮೀಪ ಗೀತೇಶ ತಮ್ಮ ಸ್ನೇಹಿತರೊಂದಿಗೆ ನಿಂತುಕೊಂಡಿದ್ದ ವೇಳೆ ವೈಭವ್ ತಾಮ್ಸೆ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರಶ್ನೆ ಕೇಳಿದ ಗೀತೇಶನ ಮೇಲೆ ವೈಭವ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಕಿಶನ್, ಆದೇಶ್ ಹಾಗೂ ಶಿವನಾಥ ಕೂಡ ಸ್ಥಳಕ್ಕೆ ಬಂದು ಗೀತೇಶನನ್ನು ಸುತ್ತುವರೆದು ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯಿಂದ ಗೀತೇಶನ ಎಡ ಕುತ್ತಿಗೆ, ಮುಖದ ಭಾಗ ಮತ್ತು ಕಣ್ಣಿನ ಮೇಲ್ಭಾಗಕ್ಕೆ ಗಾಯಗಳಾಗಿದ್ದು, ದೇಹದ ಒಳ ಭಾಗಕ್ಕೂ ನೋವುಂಟಾಗಿದೆ.

ಇದೇ ವೇಳೆ ಆರೋಪಿಗಳು “ಇಂದು ನಿನ್ನನ್ನು ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ಗೀತೇಶ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Please Share: