ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನೌಕಾನೆಲೆ ಒಳಗಿನ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸೈನಿಕರೊಬ್ಬರು ಗಾಯಗೊಂಡ ಘಟನೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಡವಾಡದ ಶ್ರೀ ವೆಂಕಟ್ರಮಣ ದೇವಸ್ಥಾನ ಸಮೀಪ ನಿವಾಸಿಯಾಗಿರುವ ಶುಭಾಂಗಿ ದಿನೇಶ ಪೈ (54) ಅವರು ನೀಡಿದ ದೂರಿನ ಪ್ರಕಾರ, ಶನಿವಾರ ಬೆಳಿಗ್ಗೆ 11.20ರ ಸುಮಾರಿಗೆ ತಮ್ಮ ಗಂಡ ದಿನೇಶ ರಾಮಚಂದ್ರ ಪೈ ಅವರೊಂದಿಗೆ ಕೆಎ-30/ಆರ್-0127 ಸಂಖ್ಯೆಯ ಆಕ್ಟಿವಾ ಸ್ಕೂಟರ್‌ನಲ್ಲಿ ಅರ್ಗಾ ನೌಕಾನೆಲೆ ಒಳಗಿನ ಮಿಲಿಟರಿ ಕ್ಯಾಂಟೀನ್‌ಗೆ ಸಾಮಾನು ತರಲು ತೆರಳಿದ್ದರು.

ಈ ವೇಳೆ ನೌಕಾನೆಲೆ ಒಳಗಿನ ರಸ್ತೆಯಲ್ಲಿ ಅತೀವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದ ಅಪರಿಚಿತ ಚಾಲಕ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್ ಸವಾರ ದಿನೇಶ ರಾಮಚಂದ್ರ ಪೈ ಅವರಿಗೆ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತದ ಬಳಿಕ ಕಾರು ಚಾಲಕನೇ ಗಾಯಾಳುವರನ್ನು ನೌಕಾನೆಲೆ ಎಂ.ಐ. ರೂಮಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿಸಿ ನಂತರ ಸ್ಥಳದಿಂದ ತೆರಳಿದ್ದಾನೆ. ಬಳಿಕ ಗಾಯಾಳುವರನ್ನು ಕಾರವಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಚಿಕಿತ್ಸೆ ನೀಡಲಾಗಿದೆ.

ಅಪಘಾತಕ್ಕೆ ಕಾರಣವಾದ ಕಾರು ಹಾಗೂ ಚಾಲಕನ ವಿವರ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Please Share: