ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಬಾಡದ ಚಂದ್ರಾದೇವಿ ಮೈದಾನದಲ್ಲಿ ಮಾರ್ಚ್ 25ರಿಂದ 29ರವರೆಗೆ ‘ಪಡ್ತಿ ಸಮಾಜ ಪ್ರೀಮಿಯರ್ ಲೀಗ್’ (PPL) ಸೀಸನ್-3 ಕ್ರಿಕೆಟ್ ಟೂರ್ನಿ ಅದ್ದೂರಿಯಾಗಿ ನಡೆಯಲಿದೆ ಎಂದು ಆಯೋಜಕ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡ್ತಿ ಸಮಾಜ ಪ್ರೀಮಿಯರ್ ಲೀಗ್ ಸಮಿತಿ ಹಾಗೂ ಸಹ-ಆಯೋಜಕರಾದ ಚಂದ್ರಾದೇವಿ ಸ್ಪೋರ್ಟ್ಸ್ ಕ್ಲಬ್ ಮತ್ತು ಎನ್.ಬಿ.ಸಿ ಸ್ಪೋರ್ಟ್ಸ್ ಕ್ಲಬ್ ಹಿರೇಶಿಟ್ಟಾ ಇವರ ಜಂಟಿ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಲಿದೆ ಎಂದರು. ಮಾರ್ಚ್ 25ರಂದು ಬೆಳಿಗ್ಗೆ 9:15ಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ 6 ತಂಡಗಳೊಂದಿಗೆ ಯಶಸ್ವಿಯಾಗಿ ನಡೆದಿದ್ದ ಈ ಟೂರ್ನಿ, ಈ ಬಾರಿ 10 ತಂಡಗಳೊಂದಿಗೆ ಮತ್ತಷ್ಟು ರಂಗೇರಲಿದೆ. ಮಾರ್ಚ್ 1ರಂದು ನಡೆದ ಐಪಿಎಲ್ ಮಾದರಿಯ ಆಟಗಾರರ ಹರಾಜಿನಲ್ಲಿ ಸುಮಾರು 225 ಮಂದಿ ಭಾಗವಹಿಸಿದ್ದು, ಪ್ರತಿ ತಂಡವು ಇಬ್ಬರು ಐಕಾನ್ ಆಟಗಾರರನ್ನು ಒಳಗೊಂಡಂತೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅನಿಲ್ ಗಾಂವಕರ, ಮಹೇಶ ಗಾಂವಕರ, ಅಮಿತ್ ತಳೇಕರ್ ಹಾಗೂ ಸಂದೀಪ ಕಂತ್ರೇಕರ್ ಅವರು ತಲಾ ₹13,500ಕ್ಕೆ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ.
ಈ ಬಾರಿ ಟೂರ್ನಿಯಲ್ಲಿ ಅಮ್ಚೆ ಸೂಪರ್ ಕಿಂಗ್ಸ್ ಅಮದಳ್ಳಿ, ಅಸ್ನೋಟಿ ಟೈಗರ್ಸ್, ಚಂದ್ರಾದೇವಿ ಟೈಗರ್ಸ್, ಚೆಂಡಿಯಾ ಚಾಲೆಂಜರ್ಸ್, ಎನ್.ಬಿ.ಸಿ ಹಿರೇಶಿಟ್ಟಾ, ಓಂ ಸಾಯಿ ಹಳಗೇಜೂಗ್, ರಾಮ ಬೇತಾಳ ವಾರಿಯರ್ಸ್, ರಾಮಸಾಥಿ ಚಾಂಪಿಯನ್ ಬ್ಲಾಸ್ಟರ್ಸ್, ಸೂಪರ್ ಸ್ಟ್ರೈಕರ್ಸ್ ಪೂಜಗೇರಿ ಹಾಗೂ ಯಂಗ್ ಚಾಣಕ್ಯ ಕಡವಾಡ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಬಹುಮಾನಗಳ ವಿವರ ನೀಡಿದ ಸದಸ್ಯ ನರೇಂದ್ರ ತಳೇಕರ್, ಪ್ರಥಮ ಸ್ಥಾನಕ್ಕೆ ₹2 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ₹1 ಲಕ್ಷ ಹಾಗೂ ಟ್ರೋಫಿ, ತೃತೀಯ ಸ್ಥಾನಕ್ಕೆ ₹50 ಸಾವಿರ ಮತ್ತು ಟ್ರೋಫಿ ನೀಡಲಾಗುತ್ತದೆ ಎಂದು ಹೇಳಿದರು.
ಇದಲ್ಲದೆ ಅತ್ಯುತ್ತಮ ಬ್ಯಾಟ್ಸ್ಮನ್, ಬೌಲರ್ ಹಾಗೂ ಸರಣಿ ಶ್ರೇಷ್ಠ ಆಟಗಾರರಿಗೆ ವಿಶೇಷ ಬಹುಮಾನಗಳೂ ಇವೆ.
ಈ ಟೂರ್ನಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸೀಸನ್-1ರಿಂದ ನಿರಂತರ ಬೆಂಬಲ ನೀಡುತ್ತಾ ಬಂದಿದ್ದಾರೆ. ಪಂದ್ಯಾವಳಿಯು ಯೂಟ್ಯೂಬ್ ಮೂಲಕ ನೇರಪ್ರಸಾರವಾಗಲಿದ್ದು, ರಾಜ್ಯಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ವೀಕ್ಷಣೆಗೆ ಲಭ್ಯವಿರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಂಡದ ಮಾಲೀಕರು ಮತ್ತು ಐಕಾನ್ ಆಟಗಾರರ ಸಮ್ಮುಖದಲ್ಲಿ ತಂಡಗಳ ಜೆರ್ಸಿ ಅನಾವರಣಗೊಳಿಸಲಾಯಿತು. ಸಮಾಜದ ಎಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಟೂರ್ನಿಯನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ್ ಕೊಚರೇಕರ್, ಪ್ರದೀಪ ಗೋವೇಕರ್, ಕಾರ್ಯದರ್ಶಿ ಉಲ್ಲಾಸ್ ನಾಗೇಕರ್ ಸೇರಿದಂತೆ ಪ್ರಶಾಂತ ತಳೇಕರ್, ಸಂತೋಷ ಟಕ್ಕರಕರ್, ಗಿರೀಶ ಕೊಠಾರಕರ್, ಸಂತೋಷ ಪಂಜುಲೇಕರ್ ಮತ್ತು ಉಲ್ಲಾಸ್ ತಳೇಕರ್ ಉಪಸ್ಥಿತರಿದ್ದರು.
