ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದಲ್ಲಿ ರಸ್ತೆ ಹಾಗೂ ಫುಟ್ಪಾತ್ಗಳನ್ನು ಅತಿಕ್ರಮಣ ಮಾಡಿ ಗೂಡಂಗಡಿಗಳನ್ನು ಸ್ಥಾಪಿಸಿದ್ದ ಬೀದಿ ವ್ಯಾಪಾರಿಗಳ ವಿರುದ್ಧ ನಗರಸಭೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಿಢೀರ್ ತೆರವು ಕಾರ್ಯಾಚರಣೆ ನಡೆಸಿದರು.
ನಗರದ ಪ್ರಮುಖ ಪ್ರದೇಶಗಳಾದ ಎಂ.ಜಿ ರಸ್ತೆ, ಪಿಕಳೆ ರಸ್ತೆ ಸೇರಿದಂತೆ ಜನಸಂಚಾರ ಹೆಚ್ಚಿರುವ ಭಾಗಗಳಲ್ಲಿ ಗೂಡಂಗಡಿಗಳು ರಸ್ತೆ, ಫುಟ್ಪಾತ್ ಹಾಗೂ ಪಾರ್ಕಿಂಗ್ ಜಾಗಗಳನ್ನು ಅತಿಕ್ರಮಿಸಿಕೊಂಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಕುರಿತು ನಗರಸಭೆಗೆ ಅನೇಕ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ರಸ್ತೆ ಮೇಲೆ ಇಟ್ಟಿದ್ದ ಫ್ರಿಜ್ ಸೇರಿದಂತೆ ವಿವಿಧ ಅಂಗಡಿ ಸಾಮಗ್ರಿಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸಲಾಯಿತು. ಹಲವೆಡೆ ಗೂಡಂಗಡಿಗಳ ಸಂಪೂರ್ಣ ತೆರವು ಕಾರ್ಯಾಚರಣೆ ನಡೆಸಿ, ರಸ್ತೆ ಮತ್ತು ಫುಟ್ಪಾತ್ಗಳನ್ನು ಖಾಲಿ ಮಾಡಲಾಯಿತು.
ಅಂಗಡಿಕಾರರಿಂದ ವಿರೋಧ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಬೆಳಿಗ್ಗೆ ವೇಳೆಯಲ್ಲೇ ಕಾರ್ಯಾಚರಣೆ ಕೈಗೊಂಡರು. ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಹಾಜರಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.
