ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಮನೆಯ ಹಿಂಭಾಗದ ಬಾವಿಗೆ ಬಿದ್ದ ಎರಡು ವರ್ಷದ ಬಾಲೆಯನ್ನು ಧೈರ್ಯದಿಂದ ಬಾವಿಗಿಳಿದು ರಕ್ಷಿಸಿದ ಘಟನೆ ಸೋಮವಾರ ಮಧ್ಯಾಹ್ನ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ನಡೆದಿದೆ.

ಭುವಿ (2) ಎಂಬ ಬಾಲೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮನೆಯ ಹಿಂದಿನ ಬಾವಿಗೆ ಬಿದ್ದಿದ್ದಾಳೆ. ಮನೆಯಲ್ಲಿ ಊಟಕ್ಕೆ ಕರೆಸಲು ಹುಡುಕಿದರೂ ಮಗು ಕಾಣಿಸದೇ ಇದ್ದುದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು.

ಬಾಲೆಯ ಅಜ್ಜಿ ಮನೆಯ ಹಿಂಭಾಗದ ಬಾವಿ ಬಳಿ ತೆರಳಿ ನೋಡಿದಾಗ ಒಳಗಿನಿಂದ ಅಳುವಿನ ಶಬ್ದ ಕೇಳಿ ಸಂಶಯಗೊಂಡಿದ್ದಾರೆ. ಬಾವಿಯೊಳಗೆ ನೋಡಿದಾಗ ಮಗು ಪಂಪ್‌ಗೆ ಅಳವಡಿಸಲಾಗಿದ್ದ ಪೈಪ್‌ಗೆ ಹಿಡಿದುಕೊಂಡು ಅಳುತ್ತಿರುವುದು ಕಂಡುಬಂದಿದೆ.

ಈ ಸುದ್ದಿ ತಕ್ಷಣವೇ ಅಕ್ಕಪಕ್ಕದ ಮನೆಗಳಿಗೆ ಹರಡಿತು. ಇದೇ ವೇಳೆ ಸಮೀಪದಲ್ಲೇ ವಾಸಿಸುತ್ತಿದ್ದ ಸಾರೀಕಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಪಯ್ಯು ಚವಟಿಯವರಿಗೂ ವಿಷಯ ತಿಳಿದುಬಂದಿತು. ಆಗ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಅವರು ಕ್ಷಣವೂ ವಿಳಂಬ ಮಾಡದೆ ಪ್ಯಾಂಟ್ ಮತ್ತು ಶರ್ಟ್ ಕಳಚಿ ಬಾವಿಯ ಕಡೆಗೆ ಓಡಿದರು.

ಸ್ಥಳೀಯರ ಸಹಾಯದಿಂದ ಬಾವಿಗಿಳಿದ ಪಯ್ಯು ಚವಟಿಯವರು ಪೈಪ್ ಹಿಡಿದುಕೊಂಡಿದ್ದ ಬಾಲೆಯನ್ನು ಎಚ್ಚರಿಕೆಯಿಂದ ಮೇಲಕ್ಕೆತ್ತಿ ಜೀವಂತವಾಗಿ ರಕ್ಷಿಸಲು ಯಶಸ್ವಿಯಾದರು. ಈ ವೇಳೆ ಸ್ಥಳದಲ್ಲಿದ್ದವರು ಭಯಭೀತರಾಗಿದ್ದರೂ ಬಾಲೆಯನ್ನು ಸುರಕ್ಷಿತವಾಗಿ ಹೊರತೆಗೆದ ಕಾರಣ ಕುಟುಂಬಸ್ಥರು ಹಾಗೂ ಸ್ಥಳೀಯರು ನೆಮ್ಮದಿ ಉಸಿರಿಟ್ಟರು.

ಮಗುವನ್ನು ರಕ್ಷಿಸಿದ ಪಯ್ಯು ಚವಟಿಯವರನ್ನು ಬಾಲೆಯ ಅಜ್ಜಿ “ನಮ್ಮ ಪಾಲಿನ ದೇವರು” ಎಂದು ಕೊಂಡಾಡಿದರು. ಆದರೆ ಪಯ್ಯು ಚವಟಿಯವರು “ಆ ಕ್ಷಣದಲ್ಲಿ ಯಾರೇ ಇದ್ದರೂ ಇದೇ ಕೆಲಸ ಮಾಡುತ್ತಿದ್ದರು” ಎಂದು ವಿನಮ್ರವಾಗಿ ಪ್ರತಿಕ್ರಿಯಿಸಿದರು.

ಈ ಘಟನೆ ಸ್ಥಳೀಯರಲ್ಲಿ ಪಯ್ಯು ಚವಟಿಯವರ ಧೈರ್ಯ ಮತ್ತು ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುವಂತೆ ಮಾಡಿದೆ.

 

Please Share: