ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನ ಕಲಕೊಪ್ಪ ಕ್ರಾಸ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಹಾನಗಲ್ ತಾಲೂಕಿನ ಕೊಪ್ಪರಿಸಿಕೊಪ್ಪ ಗ್ರಾಮದ ಎಲ್ಲಪ್ಪ ಎಸ್. ಕೊಡದ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಟ್ಟಲ್ ಎಸ್. ಚೋಳಪ್ಪನವರ್ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟಿಪ್ಪರ್ ಲಾರಿಯೊಂದಿಗೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ಪರಿಣಾಮವಾಗಿ ಎಲ್ಲಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ವಿಟ್ಟಲ್ ಅವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ–ಶಿರಸಿ ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಸಂಚಾರ ಅತಿಯಾಗಿ ಹೆಚ್ಚಾಗಿರುವುದರಿಂದ ಅಪಘಾತಗಳ ಭೀತಿ ಹೆಚ್ಚುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಿರಸಿಯಿಂದ ಹಾನಗಲ್ಲಿಗೆ ಹಾಗೂ ಹಾನಗಲ್ಲಿನಿಂದ ಪಾಳಾ ಮಾರ್ಗವಾಗಿ ಶಿರಸಿಗೆ ಕಲ್ಲು ಗಣಿಗಾರಿಕೆಯಿಂದ ಜೆಲ್ಲಿ ತುಂಬಿಕೊಂಡು ಸಾಗುವ ಟಿಪ್ಪರ್ ಲಾರಿಗಳು ಹಗಲು-ರಾತ್ರಿ ಎನ್ನದೆ ವೇಗವಾಗಿ ಸಂಚರಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಈ ಮಾರ್ಗದಲ್ಲಿ ಟಿಪ್ಪರ್‌ಗಳ ಅತಿಯಾದ ಓಡಾಟದಿಂದ ವಾಹನ ಸವಾರರಿಗೆ ಅಪಾಯ ಹೆಚ್ಚಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಘಟನೆ ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

Please Share: