ಕರಾವಳಿ ವಾಯ್ಸ್ ನ್ಯೂಸ್
ಗೋವಾ: ಕಾರಿನ ಮೇಲೆ ‘ಪೊಲೀಸ್’ ಎಂಬ ಬೋರ್ಡ್ ಅಳವಡಿಸಿಕೊಂಡು ತಾವು ಕರ್ತವ್ಯನಿರತ ಪೊಲೀಸರು ಎಂದು ಹೇಳಿಕೊಂಡು ಸುತ್ತಾಡುತ್ತಿದ್ದ ಕರ್ನಾಟಕ ಮೂಲದ ಪ್ರವಾಸಿಗರ ಗುಂಪನ್ನು ಸ್ಥಳೀಯರು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಗೋವಾದ ಪ್ರಸಿದ್ಧ ಕಲಂಗುಟ್ ಕಡಲತೀರ ಪ್ರದೇಶದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ವೈಟ್ ಬೋರ್ಡ್ ಕಾರಿನ ಮೇಲೆ ‘ಪೊಲೀಸ್’ ಎಂಬ ಫಲಕ ಅಳವಡಿಸಿಕೊಂಡು ಪ್ರವಾಸಿಗರು ಮುಕ್ತವಾಗಿ ಓಡಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ‘ಅಮ್ಚೆ ಗೋವಾ’ (Amche Goa) ಫೇಸ್ಬುಕ್ ಪೇಜ್ನ ಸದಸ್ಯರು ವಾಹನವನ್ನು ತಡೆದು ಪ್ರಶ್ನಿಸಿದರು.
ಆರಂಭದಲ್ಲಿ ಪ್ರವಾಸಿಗರು ದರ್ಪ ತೋರಿದ್ದು, ತಾವು ‘ಆನ್ ಡ್ಯೂಟಿ’ಯಲ್ಲಿರುವ ಪೊಲೀಸರು ಎಂದು ಹೇಳಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸ್ಥಳೀಯರು ಇದನ್ನು ಒಪ್ಪದೇ ಪ್ರಶ್ನೆ ಮುಂದುವರಿಸಿ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ನಿಜವಾದ ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಪ್ರವಾಸಿಗರು ತಮ್ಮ ಮಾತನ್ನು ಬದಲಿಸಿ, “ನಾವು ಹಾಗೆ ಹೇಳಿಲ್ಲ” ಎಂದು ಹೇಳಿ ಕಾರಿನಲ್ಲಿದ್ದ ‘ಪೊಲೀಸ್’ ಬೋರ್ಡ್ ಅನ್ನು ಮರೆಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕಾರು ತೆರೆಯುವಂತೆ ಒತ್ತಾಯಿಸಿ, ಬಚ್ಚಿಟ್ಟಿದ್ದ ಬೋರ್ಡ್ ಅನ್ನು ಹೊರತೆಗೆಸಿದ್ದಾರೆ. ಕೊನೆಗೆ ಪೊಲೀಸರ ಸಮ್ಮುಖದಲ್ಲೇ ಪ್ರವಾಸಿಗರು ಕಾರಿನಲ್ಲಿದ್ದ ‘ಪೊಲೀಸ್’ ಬೋರ್ಡ್ ಅನ್ನು ಹೊರತೆಗೆದು ತಲೆತಗ್ಗಿಸಿ ನಿಲ್ಲಬೇಕಾಯಿತು.
ನಕಲಿ ರೀತಿಯಲ್ಲಿ ಪೊಲೀಸರ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಿಯಮಬಾಹಿರವಾಗಿ ಸುತ್ತಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
