ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಖಾಕಿ ಬಣ್ಣದ ಉಡುಪಿನಲ್ಲಿ ಅಬಕಾರಿ ಸಿಬ್ಬಂದಿಯನ್ನು ಕಂಡ ವ್ಯಕ್ತಿಯೊಬ್ಬನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ ವಾಹನ ಸಮೇತ ಬಿದ್ದು, ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Banner Ad

ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗದ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಕಾರವಾರ ವಲಯ ವ್ಯಾಪ್ತಿಯ ಮಾರ್ಗ ಸಂಖ್ಯೆ–2ರಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 12.30ರ ವೇಳೆ ಗಸ್ತು ಸಂಚರಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಮುಡಗೇರಿ ಅರಣ್ಯ ಪ್ರದೇಶದತ್ತ ತೆರಳಿದರು.

ಸ್ವಲ್ಪ ಸಮಯದ ನಂತರ ಮುಡಗೇರಿ ಅರಣ್ಯ ಪ್ರದೇಶದಿಂದ ಮುಡಗೇರಿ ಗ್ರಾಮದ ಕಡೆಗೆ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿ ಕಂಡುಬಂದನು. ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ವಾಹನ ನಿಲ್ಲಿಸಲು ಹಲವು ಬಾರಿ ಸೂಚನೆ ನೀಡಿದರೂ ಸವಾರನು ಅತಿ ವೇಗದಲ್ಲಿ ಓಡಿಸಲು ಆರಂಭಿಸಿದನು.

ಮುಂದೆ ತಿರುವುಗಳು ಹೆಚ್ಚು ಇರುವುದರಿಂದ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಬದಿಗೆ ಬಿದ್ದುಹೋಯಿತು. ಈ ವೇಳೆ ಸವಾರನು ವಾಹನ ಹಾಗೂ ಚೀಲವನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾದನು.

ಸ್ಥಳ ಪರಿಶೀಲಿಸಿದ ವೇಳೆ ಚೀಲದಲ್ಲಿ 750 ಮಿಲಿ ಸಾಮರ್ಥ್ಯದ 36 ಗೋವಾ ಸ್ಪೆಷಲ್ ಫಾಮ್ ಫೆನ್ನಿ ಬಾಟಲಿ ಹಾಗೂ 500 ಮಿಲಿ ಸಾಮರ್ಥ್ಯದ 12 ಕಿಂಗ್‌ಫಿಷರ್ ಸ್ಟ್ರಾಂಗ್ ಬಿಯರ್ ಟಿನ್‌ಗಳು ಪತ್ತೆಯಾದವು.

ಅಬಕಾರಿ ಸಿಬ್ಬಂದಿ ಗೋವಾ ಮದ್ಯ ಹಾಗೂ KA-30 R-7906 ಸಂಖ್ಯೆಯ ದ್ವಿಚಕ್ರ ವಾಹನವನ್ನು ಜಪ್ತುಗೊಳಿಸಿದ್ದು, ಒಟ್ಟು ಅಂದಾಜು ಮೌಲ್ಯ ₹79,800 ಎಂದು ತಿಳಿದುಬಂದಿದೆ.

ಈ ಕುರಿತು ಅಬಕಾರಿ ನಿರೀಕ್ಷಕರು ಜಿಲ್ಲಾ ತಂಡದ ವತಿಯಿಂದ ಪ್ರಕರಣ ದಾಖಲಿಸಿದ್ದು, ಪರಾರಿಯಾದ ಆರೋಪಿತನ ಪತ್ತೆಗೆ ಮುಂದಿನ ತನಿಖೆ ಮುಂದುವರಿದಿದೆ.

 

 

Please Share: