ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ವ್ಯಕ್ತಿಯೊಬ್ಬ ಮಾಗೋಡಿನ ಜೇನುಕಲ್ಲು ಗುಡ್ಡದಿಂದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಧಾರವಾಡದ ಹೊಸ ಯಲ್ಲಾಪುರ ಕಂಪ್ಲಿ ಬಸವೇಶ್ವರ ನಗರದ ನಿವಾಸಿಯಾದ ಶ್ರೀನಿಧಿ ಕೃಷ್ಣಾ ಕಡಕೋಳ (23) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈತ ಮಾ.4 ರಂದು ಗೋಕರ್ಣಕ್ಕೆ ಹೋಗಿ ಬರುತ್ತೇನೆಂದು ಹೇಳಿ ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದ. ಆದರೆ ಮಾ.7 ರಂದು ಯಲ್ಲಾಪುರ ತಾಲೂಕಿನ ಮಾಗೋಡಿನ ಜೇನುಕಲ್ಲು ಗುಡ್ಡ ಪ್ರದೇಶದಲ್ಲಿ ಈತನ ಶವ ಪತ್ತೆಯಾಗಿದೆ. ಮೇಲಿನಿಂದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಮೃತದೇಹವನ್ನು ಗುಡ್ಡದಿಂದ ಹೊರತೆಗೆದಿದ್ದಾರೆ.
ಈ ಸಂಬಂಧ ಮೃತನ ತಂದೆ ಹಾಗೂ ಧಾರವಾಡದ ಖಾಸಗಿ ಬ್ಯಾಂಕ್ ಒಂದರ ವ್ಯವಸ್ಥಾಪಕರಾಗಿರುವ ಕೃಷ್ಣ ಶ್ರೀನಿವಾಸ ಕಡಕೋಳ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
