ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ನಗರದ ಲಮಾಣಿ ಚಾಳದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕನೊಬ್ಬ, ಸತತ ಹುಡುಕಾಟದ ನಂತರ ತನ್ನದೇ ಮನೆಯ ಟೆರೇಸ್ ಮೆಟ್ಟಿಲ ಕೆಳಗೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಅಂಗೈಯಲ್ಲಿ ತುಪ್ಪ ಹಿಡಿದು ಊರೆಲ್ಲಾ ಹುಡುಕಿದಂತೆ ಈ ಘಟನೆ ನಡೆದಿದ್ದು, ಮಗು ನಾಪತ್ತೆಯಾದ ಸುದ್ದಿಯು ಕ್ಷಣ ಕಾಲ ಓಣಿಯ ತುಂಬೆಲ್ಲಾ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

ಲಮಾಣಿ ಚಾಳದ ನಿವಾಸಿ ಅಜಾನ್ ಅಹಮದ್ ಯಾಸಿನ್ ಹೆಬ್ಬಳ್ಳಿ ಎಂಬ ನಾಲ್ಕು ವರ್ಷದ ಮಗು ಶುಕ್ರವಾರ ಬೆಳಿಗ್ಗೆ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿತ್ತು. ಆದರೆ, ಬಹಳ ಹೊತ್ತಾದರೂ ಮರಳಿ ಬಾರದಿದ್ದಾಗ ಆತಂಕಗೊಂಡ ಮನೆಯವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಬಾಲಕನ ಪತ್ತೆಗಾಗಿ ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ ಠಾಣೆಗಳಿಗೆ ಮಾಹಿತಿಯನ್ನು ರವಾನಿಸಲಾಗಿತ್ತು. ಜೊತೆಗೆ ನಗರದ ಅನೇಕ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿತ್ತು.

ಮಗು ಕಾಣೆಯಾದ ಸುದ್ದಿ ಊರೆಲ್ಲಾ ಹರಡುತ್ತಿದ್ದಂತೆ ಜನರು ಓಣಿಯಲ್ಲಿ ಜಮಾಯಿಸಿದ್ದರು ಹಾಗೂ ಬಾಲಕ ಸುರಕ್ಷಿತವಾಗಿ ಪೋಷಕರಿಗೆ ಸಿಗಲಿ ಎಂದು ಎಲ್ಲಾ ಧರ್ಮದವರೂ ಪ್ರಾರ್ಥಿಸಿದ್ದರು. ಮಗುವಿನ ಹುಡುಕಾಟ ಜೋರಾಗಿದ್ದರೂ, ಸುಮಾರು ನಾಲ್ಕೈದು ತಾಸುಗಳ ಬಳಿಕ ಮನೆಯನ್ನು ಮತ್ತೊಮ್ಮೆ ಶೋಧಿಸಿದಾಗ ಬಾಲಕನು ಮಾಳಿಗೆಯ (ಟೆರೇಸ್) ಮೆಟ್ಟಿಲ ಕೆಳಗೆ ಮಲಗಿದ್ದು ಕಂಡುಬಂದಿದ್ದಾನೆ.

ಸತತ ಐದಾರು ಗಂಟೆಗಳ ಕಾಲ ಆತಂಕ ಸೃಷ್ಟಿಸಿದ್ದ ಬಾಲಕ ಕೊನೆಗೂ ಸುರಕ್ಷಿತವಾಗಿ ಮನೆಯಲ್ಲೇ ಪತ್ತೆಯಾಗಿದ್ದು, ಪೋಷಕರು ಹಾಗೂ ನೆರೆಹೊರೆಯವರು ನಿರಾಳರಾಗಿದ್ದಾರೆ.

Please Share: