ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನ ಜಾತ್ರೆಗೆಂದು ಮಕ್ಕಳೊಂದಿಗೆ ಸಂಭ್ರಮದಿಂದ ಹೊರಟಿದ್ದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಸೋಮವಾರ ಸಂಜೆ ಶಿರಸಿ–ಹುಬ್ಬಳ್ಳಿ ಹೆದ್ದಾರಿಯ ಹುಡೆಲಕೊಪ್ಪ ಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಬಸವರಾಜ ಕಚುವೆ (45) ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಹಾವೇ ಕಾರಣವಾಯಿತೇ?
ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಬಸವರಾಜ ಅವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಬೈಕ್‌ನಲ್ಲಿ ಮಳಗಿಯಿಂದ ಶಿರಸಿ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಅವರ ಮುಂದಿದ್ದ ಕೆಎಸ್ಆರ್ಟಿಸಿ ಬಸ್ ಮುಂಭಾಗದಲ್ಲಿ ಏಕಾಏಕಿ ಹಾವೊಂದು ರಸ್ತೆ ದಾಟಲು ಬಂದಿದೆ ಎನ್ನಲಾಗಿದೆ. ಹಾವನ್ನು ಉಳಿಸುವ ಉದ್ದೇಶದಿಂದ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸವರಾಜ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬರಿಗೆ ಗಾಯಗಳಾಗಿದ್ದು, ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕನ ದೂರಿನಲ್ಲಿ ಬೇರೆ ಕಥೆ
ಘಟನೆ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಮಲ್ಲಪ್ಪ ಗುರಪ್ಪ ನಾಗೋಡ ಅವರು ನೀಡಿದ ದೂರಿನಲ್ಲಿ, ಬಳ್ಳಾರಿಯಿಂದ ಕುಮಟಾಕ್ಕೆ ಬಸ್ ಸಂಖ್ಯೆ (KA 42 F 1241) ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹುಡೆಲಕೊಪ್ಪ ಬಳಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ರಸ್ತೆ ತಗ್ಗು-ಗುಂಡಿಗಳ ಕಾರಣಕ್ಕೆ ಬಸ್ ವೇಗ ಕಡಿಮೆ ಮಾಡಿದ್ದಾಗ, ಹಿಂಬದಿಯಿಂದ ಅತಿವೇಗದಲ್ಲಿ ಬಂದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.
ಚಾಲಕನ ದೂರಿನಲ್ಲಿ ಬೈಕ್ ಸವಾರನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ತನಿಖೆ ಮುಂದುವರಿಕೆ
ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಅಪಘಾತ ಬರಸಿಡಿಲಿನಂತೆ ಎರಗಿದೆ. ಹಾವು ರಸ್ತೆ ದಾಟಿದ ಕಾರಣ ಬ್ರೇಕ್ ಹಾಕಲಾಗಿತ್ತೇ? ಅಥವಾ ರಸ್ತೆ ತಗ್ಗು-ಗುಂಡಿಗಳೇ ಅಪಘಾತಕ್ಕೆ ಕಾರಣವೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸವನ್ನು ಪೊಲೀಸರು ಕೈಗೊಂಡಿದ್ದಾರೆ.
ಒಟ್ಟಾರೆಯಾಗಿ ದೇವಿಯ ದರ್ಶನಕ್ಕಾಗಿ ಹೊರಟಿದ್ದ ಭಕ್ತನೊಬ್ಬ ಅರ್ಧದಾರಿಯಲ್ಲೇ ಪ್ರಾಣ ಕಳೆದುಕೊಂಡಿರುವುದು ಮಳಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
