ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಎದ್ದು ಹೊರಟ ಘಟನೆ ಸೋಮವಾರ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧ ಕೊರತೆ ಹಾಗೂ ವೈದ್ಯರ ಅಭಾವದ ವಿಷಯ ಚರ್ಚೆಗೆ ಬಂದಿತು. ಈ ವೇಳೆ ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಮೆಡಿಸಿನ್ ಕೊರತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸತೀಶ್ ಸೈಲ್, “ವೈದ್ಯರೇ ಇಲ್ಲದಿದ್ದರೆ ಮೆಡಿಸಿನ್ ಯಾರಿಂದ ಕೊಡಲಾಗುತ್ತದೆ? ನೆಲಮಟ್ಟದ ವಾಸ್ತವ ಸ್ಥಿತಿ ಬೇರೆಯಾಗಿದೆ. ಜನರು ಸಮಸ್ಯೆಗಳ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಾರೆ,” ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, “ವೈದ್ಯರ ಕೊರತೆ ಇದ್ದರೆ ನೀವು ತರಬೇಕು,” ಎಂದು ಹೇಳಿದ ಮಾತು ಶಾಸಕ ಸೈಲ್ ಅವರನ್ನು ಮತ್ತಷ್ಟು ಸಿಟ್ಟಿಗೆದ್ದಂತೆ ಮಾಡಿತು.

“ಹೇಳಿದ್ದನ್ನೆಲ್ಲ ಕೇಳಿಕೊಂಡು ಹೋಗಲು ನಾವೇನು ಅಂಗೂಟಾ ಛಾಪ್ ಅಲ್ಲ. ತಾಲ್ಲೂಕಿನ ವಿಚಾರಗಳನ್ನು ಜಿಲ್ಲಾಮಟ್ಟದ ಕೆಡಿಪಿಯಲ್ಲಿ ಚರ್ಚೆ ಮಾಡಬಾರದೆಂದರೆ ನಾನು ಕೂರಲ್ಲ. ಈ ರೀತಿಯ ಸಭೆಗೆ ನಾನು ಬಂದಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ದಾಖಲಿಸಿ ಶಾಸಕ ಸತೀಶ್ ಸೈಲ್ ಸಭೆಯಿಂದ ಎದ್ದು ಹೊರಟರು. ಘಟನೆಯು ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಸಿತು.

Please Share: