ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಫೆ. 22: ಕಾಡಿನ ಒಳಗಿನ ದಾರಿಯನ್ನು ಬಳಸಿಕೊಂಡು ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಬಕಾರಿ ಇಲಾಖೆ ಭೇದಿಸಿದೆ. ಕಾರವಾರ ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದ ದಾಳಿಯಲ್ಲಿ ಸುಮಾರು ₹86 ಸಾವಿರ ಮೌಲ್ಯದ ಮದ್ಯ ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ನಿರ್ದೇಶನದಂತೆ ಮತ್ತು ಅಬಕಾರಿ ಉಪ ಅಧೀಕ್ಷಕರು, ಕಾರವಾರ ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ ಫೆಬ್ರುವರಿ 22ರಂದು ರಾತ್ರಿ 8:30ರ ಸುಮಾರಿಗೆ ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಅಚ್ಚರಿ ದಾಳಿ ನಡೆಸಿತು.
ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಎರಡು ನೈಲಾನ್ ಚೀಲಗಳಲ್ಲಿ ಗೋವಾ ಮದ್ಯವನ್ನು ಸಾಗಿಸಲಾಗುತ್ತಿತ್ತು. ತಪಾಸಣೆ ನಡೆಸಿದಾಗ ತಲಾ 36 ಬಾಟಲಿಗಳಂತೆ ಒಟ್ಟು 72 ಲೈಟ್ ಹಾರ್ಸ್ ವಿಸ್ಕಿ ಬಾಟಲಿಗಳು ಪತ್ತೆಯಾಗಿದ್ದು, ಒಟ್ಟು 54 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಜಪ್ತಿಯಾದ ಮದ್ಯದ ಅಂದಾಜು ಮೌಲ್ಯ ₹86,000/- ಎಂದು ಅಂದಾಜಿಸಲಾಗಿದೆ.
ದಾಳಿ ನಡೆಯುತ್ತಿರುವುದನ್ನು ಗಮನಿಸಿದ ಆರೋಪಿಯು ವಾಹನವನ್ನು ಬಿಟ್ಟು ಕಾಡಿನೊಳಗೆ ಪರಾರಿಯಾಗಿದ್ದಾನೆ. ಆರೋಪಿಯ ಗುರುತು ಪತ್ತೆಹಚ್ಚಲು ಅಬಕಾರಿ ಇಲಾಖೆ ಮುಂದಿನ ತನಿಖೆ ಆರಂಭಿಸಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಸಂಬಂಧ ಕಾರವಾರ ಅಬಕಾರಿ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಮದ್ಯ ಸಾಗಾಟದ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
