ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಹಳದಿಪುರದಲ್ಲಿ ರವಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಾದ ಹಳದಿಪುರದ ವಿನಾಯಕ ರಘುವೀರ ಶ್ಯಾನಭಾಗ (50) ಅವರು ಮೃತಪಟ್ಟ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಬೆಳಿಗ್ಗೆ ನಡೆದ ಅಪಘಾತದಲ್ಲಿ ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ವಿನಾಯಕ ಶ್ಯಾನಭಾಗ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುವನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿಸಿದರು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅಡಿಕೆ ವ್ಯಾಪಾರಸ್ಥರಾಗಿದ್ದ ವಿನಾಯಕ ಶ್ಯಾನಭಾಗ ಅವರು ಹಳದಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರು. ಸದಾ ಸಹೃದಯ ಹಾಗೂ ಸಮಾಜಮುಖಿ ವ್ಯಕ್ತಿತ್ವ ಹೊಂದಿದ್ದ ಅವರು ಅಕಾಲಿಕವಾಗಿ ಅಗಲಿರುವುದು ಗ್ರಾಮಸ್ಥರಲ್ಲಿ ದುಃಖ ಮೂಡಿಸಿದೆ.
ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕಾರಣ ಕುರಿತು ತನಿಖೆ ಮುಂದುವರಿದಿದೆ.
