ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ನಗರದ ಹ್ಯಾಲಿಪ್ಯಾಡ್ ಬ್ಯಾಣದ ಸಮೀಪವಿರುವ ಖಾಸಗಿ ಶಾಲೆಯೊಂದರಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಮಂಗಳೂರಿನ ಪರಂಗಿಪೇಟೆ ನಿವಾಸಿ ಅಲ್ತಾಪ್ ಮೊಹ್ಮದ್ (32) ಎಂದು ಗುರುತಿಸಲಾಗಿದೆ. ಅಲ್ತಾಪ್ ಕಳೆದ ಕೆಲ ದಿನಗಳಿಂದ ಶಿರಸಿಗೆ ಬಂದು ಶಾಲೆಯ ಪೇಂಟಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ.

ಸೋಮವಾರ ಕೆಲಸ ಮುಗಿಸಿಕೊಂಡ ಬಳಿಕ ಕೈ–ಕಾಲು ತೊಳೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಅಸ್ವಸ್ಥಗೊಂಡ ಅಲ್ತಾಪ್, ಸ್ಥಳದಲ್ಲಿದ್ದ ಸಹಕಾರ್ಮಿಕರಿಗೆ ಆತಂಕ ಮೂಡಿಸಿದ್ದಾನೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ವಿದ್ಯುತ್ ಪರಿಕರಗಳು ಇದ್ದ ಕಾರಣ, ಅಲ್ತಾಪ್ ವಿದ್ಯುತ್ ಶಾಕ್‌ಗೆ ಒಳಗಾಗಿರಬಹುದೇ?, ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದೇ?, ಇಲ್ಲವೇ ಇನ್ನಾವುದೇ ಕಾರಣ ಇದಕ್ಕೆ ಕಾರಣವಾಯಿತೇ? ಎಂಬ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.

ಈ ಸಂಬಂಧ ಅಲ್ತಾಪ್ ಜೊತೆ ಕೆಲಸ ಮಾಡುತ್ತಿದ್ದ ಸಹದ್ಯೋಗಿ, ಮಂಗಳೂರು ಪರಂಗಿಪೇಟೆಯ ಓಲ್ಡ್ ರಸ್ತೆ ನಿವಾಸಿ ಪೇಂಟರ್ ಪಿ.ಹೆಚ್. ಅಬ್ಬಾಸ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಸಾವಿನ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ.

ಘಟನೆಯಿಂದಾಗಿ ಮೃತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲಾ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಎಲ್ಲಾ ಆಯಾಮಗಳಿಂದ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Please Share: