ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಬಿಲ್ಟ್ ವೃತ್ತದ ಬಳಿ ಗುರುವಾರ ಮಧ್ಯಾಹ್ನ ನೌಕಾನೆಲೆಯ ಸಿಬ್ಬಂದಿಯ ಕಾರು ಹಾಗೂ ಸವಣೂರು–ಕಾರವಾರ ಮಾರ್ಗದ ಸಾರಿಗೆ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏರ್ಬ್ಯಾಗ್ ತೆರೆಯಲ್ಪಟ್ಟಿದೆ.
ನೌಕಾನೆಲೆಯ ಸಿಬ್ಬಂದಿ ಗುನಾಜಿತ್ ಅವರು ತಮ್ಮ ಪುತ್ರನೊಂದಿಗೆ ಕಾರವಾರದಿಂದ ನೌಕಾನೆಲೆಯತ್ತ ಹೊರಟಿದ್ದ ವೇಳೆ, ಬಿಲ್ಟ್ ವೃತ್ತದ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ವೃತ್ತದ ತಿರುವಿನಲ್ಲಿ ವೇಗ ಹಾಗೂ ವಾಹನಗಳ ಅತಿಯಾದ ಸಂಚಾರದಿಂದಾಗಿ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಎಂಜಿನ್ ಭಾಗದಿಂದ ಆಯಿಲ್ ಸೋರುತ್ತಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ತಕ್ಷಣ ಕಾರಿನಲ್ಲಿದ್ದವರಿಗೆ ಸಹಾಯ ಮಾಡಿದರು. ಸಾರ್ವಜನಿಕರ ಎಚ್ಚರಿಕೆಯಿಂದ ಕಾರು ಚಾಲಕ ಗುನಾಜಿತ್ ಹಾಗೂ ಅವರ ಪುತ್ರ ಸುರಕ್ಷಿತವಾಗಿ ವಾಹನದಿಂದ ಹೊರಬಂದರು. ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರ ಅಪಾಯ ತಪ್ಪಿದೆ.
ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ವೃತ್ತದ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ತಕ್ಷಣ ಕಾರವಾರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಿದರು. ಈ ಸಂಬಂಧ ಕಾರವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿದೆ.
ಬಿಲ್ಟ್ ವೃತ್ತದ ಬಳಿ ಪದೇಪದೆ ಅಪಘಾತಗಳು ಸಂಭವಿಸುತ್ತಿರುವುದರಿಂದ, ವೃತ್ತದಲ್ಲಿ ಸೂಕ್ತ ಸಂಚಾರ ನಿಯಂತ್ರಣ ಕ್ರಮಗಳು, ಸೂಚನಾ ಫಲಕಗಳು ಹಾಗೂ ವೇಗ ನಿಯಂತ್ರಣ ವ್ಯವಸ್ಥೆ ಅಳವಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
