ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಮಹಾರಾಷ್ಟ್ರದಿಂದ ಕೇರಳಕ್ಕೆ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬೀದಿ ದೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮುಗುಚಿ ಬಿದ್ದ ಘಟನೆ ಇಲ್ಲಿನ ಮಾದನಗೇರಿಯಲ್ಲಿ ರವಿವಾರ ಬೆಳಗಿನ ಜಾವ ಸಂಭವಿಸಿದೆ.
ನಿದ್ರೆಯ ಮಂಪರೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕ್ಷಣಾರ್ಧದಲ್ಲೇ ರಾಷ್ಟ್ರೀಯ ಹೆದ್ದಾರಿ ಮೇಲೆ ಈರುಳ್ಳಿಯ ಚೀಲಗಳೇ ಹರಡಿ ಬಿದ್ದವು.
ಬೆಳಗಿನ ಜಾವದ ನಿಶ್ಶಬ್ದವನ್ನು ಚೂರುಮೂರು ಮಾಡಿದ ಭಾರೀ ಶಬ್ದದೊಂದಿಗೆ ಲಾರಿ ಪಲ್ಟಿಯಾದ ಪರಿಣಾಮವಾಗಿ ಹೆದ್ದಾರಿಯ ಮೇಲೆ ಸಂಚಾರ ಅಸ್ತವ್ಯಸ್ತಗೊಂಡಿತು. ಈರುಳ್ಳಿ ತುಂಬಿದ್ದ ಲಾರಿ ಬೀದಿ ದೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರಣ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಹಿರೇಗುತ್ತಿ ಪೊಲೀಸ್ ಚೆಕ್ ಪೋಸ್ಟ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಅಪಘಾತದ ಸುದ್ದಿ ಹರಡುತ್ತಿದ್ದಂತೆ ಅಂಕೋಲಾದ ಹೆಸ್ಕಾಂ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಐಆರ್‌ಬಿ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುರಕ್ಷತಾ ಕ್ರಮ ಕೈಗೊಂಡರು. ಹೆದ್ದಾರಿಯ ಮೇಲೆ ಹರಡಿದ್ದ ಈರುಳ್ಳಿ ಚೀಲಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. ಸಂಜೆ ವೇಳೆಗೆ ಮತ್ತೊಂದು ಲಾರಿಗೆ ಈರುಳ್ಳಿ ಚೀಲಗಳನ್ನು ಲೋಡ್ ಮಾಡಿ ಸಂಚಾರವನ್ನು ನಿಧಾನವಾಗಿ ಪುನಃ ಸಹಜ ಸ್ಥಿತಿಗೆ ತರಲಾಯಿತು.
400ಕ್ಕೂ ಅಧಿಕ ಚೀಲ… ಜನರ “ಅವಕಾಶದ ದಾಳಿ”
ಲಾರಿಯಲ್ಲಿ ಒಟ್ಟು 400ಕ್ಕೂ ಅಧಿಕ ಈರುಳ್ಳಿ ಚೀಲಗಳು ಇದ್ದವು ಎನ್ನಲಾಗಿದ್ದು, ಅವು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಚದುರಿ ಬಿದ್ದಿದ್ದವು. ಈ ದೃಶ್ಯ ಕಂಡು ಸ್ಥಳೀಯರು ಮಾತ್ರವಲ್ಲದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರೂ ತಮ್ಮ ವಾಹನಗಳನ್ನು ನಿಲ್ಲಿಸಿ, ಮನಸ್ಸಿಗೆ ಬಂದಷ್ಟು ಈರುಳ್ಳಿಯನ್ನು ಚೀಲಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂತು.
ಅಪಘಾತದ ದುರ್ಘಟನೆ ಕ್ಷಣಕಾಲದಲ್ಲೇ “ಈರುಳ್ಳಿ ಸಂಗ್ರಹದ” ದೃಶ್ಯವಾಗಿ ಮಾರ್ಪಟ್ಟಿದ್ದು, ಕೆಲವೇ ಹೊತ್ತಿನಲ್ಲಿ ಹೆದ್ದಾರಿ ಜನಜಂಗುಳಿಯಿಂದ ತುಂಬಿಬಿಟ್ಟಿತು.
ಈ ಅಪರೂಪದ ದೃಶ್ಯವನ್ನು ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, “ಹೆದ್ದಾರಿಯಲ್ಲಿ ಈರುಳ್ಳಿ ಲೂಟ್”, “ನಿದ್ರೆಯ ಮಂಪರು – ಜನರಿಗೆ ಲಾಭ” ಎಂಬ ಶೀರ್ಷಿಕೆಗಳೊಂದಿಗೆ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.
ಇತ್ತ ಅಂಕೋಲಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನದ ಸಂಗತಿಯಾದರೂ, ರಸ್ತೆ ಸುರಕ್ಷತೆ ಹಾಗೂ ಅಪಘಾತದ ಸಂದರ್ಭದಲ್ಲಿನ ಸಾರ್ವಜನಿಕರ ಜವಾಬ್ದಾರಿ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿರುವ ಘಟನೆ ಇದಾಗಿದೆ.
