ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ತಾಲೂಕಿನ ಮಾಗವಾಡ ಗ್ರಾಮದ ಗೌಳಿವಾಡ ನಿವಾಸಿ ಕೂಲಿ ಕಾರ್ಮಿಕನೊಬ್ಬನು ಹಳಿಯಾಳ ಪಟ್ಟಣದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತದೇಹವು ಪಟ್ಟಣದ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಗಣೇಶನಗರದ ಖಾಲಿ ಜಾಗೆಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಕುರಿತು ಹಳಿಯಾಳ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತನನ್ನು ಬಾಬು ಜನ್ನು ಅಡೋಳಕರ (45) ಎಂದು ಗುರುತಿಸಲಾಗಿದೆ. ಬಾಬು ಅಡೋಳಕರ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತನಿಗೆ ಮದ್ಯಪಾನ ಮಾಡುವ ಚಟ ಇದ್ದು, ದಿನನಿತ್ಯವೂ ಕೆಲಸದಿಂದ ಬಂದ ಹಣವನ್ನು ಮದ್ಯಪಾನಕ್ಕೆ ಖರ್ಚು ಮಾಡುತ್ತಿದ್ದನು ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಕೆಲವೊಮ್ಮೆ ಮನೆಗೆ ಮರಳದೆ ಎರಡು–ಮೂರು ದಿನಗಳವರೆಗೆ ಕಾಣಿಸಿಕೊಳ್ಳದೇ ಇರುವ ಸಂದರ್ಭಗಳೂ ಇದ್ದವು ಎನ್ನಲಾಗಿದೆ.
ಮೃತ ಬಾಬು ಕಳೆದ ವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹಳಿಯಾಳಕ್ಕೆ ಬಂದಿದ್ದನು. ಆದರೆ ಆ ಬಳಿಕ ಮನೆಗೆ ಮರಳಿರಲಿಲ್ಲ. ಈ ನಡುವೆ ಮಂಗಳವಾರ ಬೆಳಿಗ್ಗೆ ಹಳಿಯಾಳ ಪಟ್ಟಣದ ಗಣಪತಿ ದೇವಸ್ಥಾನದ ಹಿಂದೆ ಇರುವ ಗಣೇಶನಗರದ ಖಾಲಿ ಜಾಗೆಯಲ್ಲಿ ವ್ಯಕ್ತಿಯೊಬ್ಬನು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ನಂತರ ಮೃತದೇಹವು ಬಾಬು ಅಡೋಳಕರ ಅವರದ್ದೆಂದು ದೃಢಪಟ್ಟಿದೆ.
ಘಟನೆಯ ಮಾಹಿತಿ ತಿಳಿದಂತೆಯೇ ಮೃತನ ಪತ್ನಿ ದೊಂಡುಬಾಯಿ ಬಾಬು ಅಡೋಳಕರ ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತದೇಹದ ಮೇಲೆ ಸ್ಪಷ್ಟ ಗಾಯಗಳ ಗುರುತುಗಳು ಕಂಡುಬಂದಿಲ್ಲವಾದರೂ, ಸಾವು ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
