ಕರಾವಳಿ ವಾಯ್ಸ್ ನ್ಯೂಸ್ 

ಗೋಕರ್ಣ: ಸಮುದ್ರದಲ್ಲಿ ಆಟವಾಡಲು ತೆರಳಿದ್ದ ಓರ್ವ ಯುವತಿ ಸುಳಿಗೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

Banner Ad

ನಾಪತ್ತೆಯಾದ ಯುವತಿಯನ್ನು ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ಎಂದು ಗುರುತಿಸಲಾಗಿದೆ. ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ಒಟ್ಟು 12 ವಿದ್ಯಾರ್ಥಿಗಳು ಪ್ರವಾಸಾರ್ಥವಾಗಿ ಗೋಕರ್ಣಕ್ಕೆ ಆಗಮಿಸಿದ್ದು, ಭಾನುವಾರ ಸಂಜೆ ಸುಮಾರು 7 ಗಂಟೆಯ ನಂತರ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅಲೆಗಳ ತೀವ್ರತೆಗೆ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾದರು.

ಘಟನೆಯಲ್ಲಿ ಮಹಮದ್ ಅಲಿ (22) ಎಂಬ ಯುವಕ ತೀವ್ರ ಅಸ್ವಸ್ಥಗೊಂಡು ದಡಕ್ಕೆ ತಲುಪಿದ್ದಾನೆ. ತಕ್ಷಣ ಸ್ಥಳೀಯರು ಮತ್ತು ಸಹಪ್ರವಾಸಿಗರ ನೆರವಿನಿಂದ ಖಾಸಗಿ ಅಂಬುಲೆನ್ಸ್ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ಅಂಕೋಲಾ ತಾಲೂಕು ವೈದ್ಯಾಧಿಕಾರಿಯೂ ಆಗಿರುವ ಹಾಗೂ ಗೋಕರ್ಣ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾ. ಜಗದೀಶ್ ನಾಯ್ಕ್ ಅವರು ಸಮಯೋಚಿತವಾಗಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹೃದಯಸ್ಪರ್ಶಿ ರಕ್ಷಣಾ ಕಾರ್ಯ ನಡೆಸಿ ಯುವಕನ ಜೀವವನ್ನು ಉಳಿಸಿದ್ದಾರೆ. ಚಿಕಿತ್ಸೆ ನಂತರ ಮಹಮದ್ ಅಲಿ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೊಂದೆಡೆ, ಸಮುದ್ರ ಸುಳಿಗೆ ಸಿಲುಕಿದ ಕಲ್ಯಾಣಿ (22) ಇನ್ನೂ ಪತ್ತೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದು, ಸಮುದ್ರದಲ್ಲಿ ತೀವ್ರ ಹುಡುಕಾಟ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರುವ ಹಿನ್ನೆಲೆ ಪ್ರವಾಸಿಗರು ಎಚ್ಚರಿಕೆಯಿಂದ ವರ್ತಿಸಬೇಕೆಂದು ಪೊಲೀಸರು ಹಾಗೂ ಸ್ಥಳೀಯ ಆಡಳಿತ ಮನವಿ ಮಾಡಿದ್ದಾರೆ.

Please Share: