ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಗೋಕರ್ಣ ಮೇನ್ ಬೀಚ್‌ನಲ್ಲಿ ರವಿವಾರ ಬೆಳಿಗ್ಗೆ ಸುಮಾರು 10.40ರ ವೇಳೆಗೆ ಸಮುದ್ರದ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೈಸೂರು ಮೂಲದ ಪ್ರವಾಸಿಗನೊಬ್ಬನನ್ನು ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿ ಜೀವ ಉಳಿಸಿದ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಮಧು (23) ಎಂಬ ಯುವಕನು ಮೈಸೂರಿನಿಂದ ತನ್ನ 10 ಮಂದಿ ಸ್ನೇಹಿತರೊಂದಿಗೆ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ. ಗೋಕರ್ಣ ಮೇನ್ ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಚಾನಕ್ ತೀವ್ರ ಸಮುದ್ರ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದ್ದಾನೆ. ಈ ಸಂದರ್ಭ ಯುವಕನ ಸ್ಥಿತಿಯನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಮೋಹನ ಅಂಬಿಗ, ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ ಹಾಗೂ ರೋಷನ್ ಖಾರ್ವಿ ಅವರು ಧೈರ್ಯದಿಂದ ಸಮುದ್ರಕ್ಕೆ ಇಳಿದು ಯುವಕನನ್ನು ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ರಕ್ಷಣಾ ಕಾರ್ಯಕ್ಕೆ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಹಾಗೂ ಜೆಸ್ಕಿ ಡ್ರೈವರ್‌ಗಳ ಸಹಕಾರ ಮಹತ್ವದ ಪಾತ್ರ ವಹಿಸಿತು.
ಬೀಚ್ ಸೂಪರ್ವೈಸರ್ ರವಿ ನಾಯ್ಕ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಅವರ ಮಾರ್ಗದರ್ಶನದಲ್ಲಿ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಜೆಸ್ಕಿ ಡ್ರೈವರ್ ದರ್ಶನ್ ಲಕ್ಕುಮನೆ, ಜಗ್ಗು ಹೊಸ್ಕಟ್ಟ, ದೀಪಕ್ ಗೌಡ, ಅಶೋಕ ಹೊಸಕಟ್ಟ, ಕಮಲಾಕರ ಹೊಸಕಟ್ಟ, ಮಹೇಶ್ ಹೊಸಕಟ್ಟ ಹಾಗೂ ಸಚಿನ್ ಹೊಸಕಟ್ಟ ಅವರು ರಕ್ಷಣಾ ಕಾರ್ಯಕ್ಕೆ ನೆರವು ನೀಡಿದರು.
ರಕ್ಷಣೆಯ ನಂತರ ಯುವಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯು ಗೋಕರ್ಣ ಬೀಚ್‌ನಲ್ಲಿ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಮತ್ತು ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯ ಜಾಗೃತಿ ಹಾಗೂ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತದೆ.
ಸಮುದ್ರದಲ್ಲಿ ಈಜಾಟದ ವೇಳೆ ಲೈಫ್‌ಗಾರ್ಡ್‌ಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
