ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಅಕ್ರಮ ಮಾರಾಟ ಉದ್ದೇಶದಿಂದ ಸರಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಆಹಾರವನ್ನು ಸಾಗಾಟ ಮಾಡುತ್ತಿದ್ದ ವೇಳೆ ಆಹಾರ ನಿರೀಕ್ಷಕರ ತಂಡ ದಾಳಿ ನಡೆಸಿ, ಓರ್ವನನ್ನು ಬಂಧಿಸಿ ಓಮಿನಿ ವಾಹನ ಹಾಗೂ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದ ಘಟನೆ ಶನಿವಾರ ಭಟ್ಕಳದಲ್ಲಿ ನಡೆದಿದೆ.
ಭಟ್ಕಳ ತಹಸಿಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ (38) ಅವರ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಿದೆ. ಭಟ್ಕಳ ಶಹರದ ಮುಗ್ಧಂ ಕಾಲೋನಿ ಸಫಾ ಸ್ಟ್ರೀಟ್ ನಿವಾಸಿ ಆಸೀಫ್ ಉಲ್ಲಾ, ತಂದೆ ಅಬ್ದುಲ್ ರಹೀಮ್ ಸಾಬ (38) ಬಂಧಿತ ಆರೋಪಿ.
ಈ ಪ್ರಕರಣದಲ್ಲಿ ಪುರವರ್ಗದ ಗಣೇಶನಗರ ನಿವಾಸಿ ಮೊಹಮ್ಮದ್ ಸಮೀರ, ತಂದೆ ಮೊಹಮ್ಮದ್ ಭಾಷಾ (29) ಹಾಗೂ ಹನುಮಾನನಗರದ ಆಟೋ ಚಾಲಕ ರಾಮಚಂದ್ರ ಮಾಸ್ತಪ್ಪ ನಾಯ್ಕ (53) ವಿರುದ್ಧವೂ ದೂರು ದಾಖಲಾಗಿದೆ.
ಬಂಧಿತ ಆರೋಪಿ ಆಸೀಫ್ ಉಲ್ಲಾ ಯಾವುದೇ ಅಧಿಕೃತ ದಾಖಲೆ ಅಥವಾ ಬಿಲ್ ಇಲ್ಲದೆ, ಸುಮಾರು ₹39,100 ಮೌಲ್ಯದ 1,150 ಕೆ.ಜಿ ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಮಾರುತಿ ಸುಜುಕಿ ಓಮಿನಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದನು. ಈ ಅಕ್ಕಿಯನ್ನು ಮುಗ್ಧಂ ಕಾಲೋನಿಯಿಂದ ಶಿರಾಲಿ ಕಡೆಗೆ ಇತರ ಆರೋಪಿತರಿಗೆ ನೀಡಲು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಟ್ಕಳ ರಂಗಿನಕಟ್ಟಾ ಟ್ರೆಂಡ್ಸ್ ಬಟ್ಟೆ ಅಂಗಡಿಯ ಎದುರುಗಡೆ ಎನ್‌ಎಚ್-66 ರಸ್ತೆಯ ಮೇಲೆ ಆಹಾರ ನಿರೀಕ್ಷಕರ ತಂಡ ದಾಳಿ ನಡೆಸಿ, ಆಸೀಫ್ ಉಲ್ಲಾನನ್ನು ವಾಹನ ಹಾಗೂ ಪಡಿತರದೊಂದಿಗೆ ವಶಕ್ಕೆ ಪಡೆದಿದೆ.
ಈ ಕುರಿತು ಮೂವರು ಆರೋಪಿಗಳ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
