ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ತಾಲೂಕಿನ ಬಿ.ಕೆ.ಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಂದ ತಮ್ಮ ವೈಯಕ್ತಿಕ ಕಾರನ್ನು ತೊಳೆಯಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆರೋಪದ ಪ್ರಕಾರ, ಶಾಲೆಯ ಶಿಕ್ಷಕ ಉದಯ್ ಅವರು ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳಿಗೆ ತಮ್ಮ ಕಾರನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳು ಕಾರು ತೊಳೆಯುತ್ತಿರುವ ದೃಶ್ಯಗಳು ಶಾಲಾ ಆವರಣದಲ್ಲಿ ಕಂಡುಬಂದಿದ್ದು, ಇದರಿಂದ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸ್ಥಳೀಯ ವ್ಯಕ್ತಿಯೊಬ್ಬರು ವಿದ್ಯಾರ್ಥಿಗಳು ಕಾರು ತೊಳೆಯುತ್ತಿರುವ ದೃಶ್ಯವನ್ನು ವೀಡಿಯೋ ಮೂಲಕ ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಈ ವಿಷಯ ಬೆಳಕಿಗೆ ಬಂದಿದೆ. ಶಿಕ್ಷಕ ಉದಯ್ ಅವರು ಹಿಂದಿನಿಂದಲೂ ವಿದ್ಯಾರ್ಥಿಗಳಿಂದಲೇ ತಮ್ಮ ಕಾರನ್ನು ತೊಳೆಯಿಸಿಕೊಳ್ಳುತ್ತಿದ್ದರೆಂದು ಕೂಡ ಆರೋಪಿಸಲಾಗಿದೆ.

ವಿಷಯ ತಿಳಿದ ಹಳಿಯಾಳದ ಬಿಇಒ ಪ್ರಮೋದ ಮಹಾಲೆ ಅವರು, ಪ್ರಕರಣದ ಕುರಿತು ಶಾಲೆಯ ಮುಖ್ಯ ಶಿಕ್ಷಕರಿಗೆ ತಕ್ಷಣವೇ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ವರದಿ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ವೈಯಕ್ತಿಕ ಕೆಲಸಗಳಿಗೆ ಬಳಸುವುದು ನಿಯಮಬಾಹಿರವಾಗಿದ್ದು, ಈ ಘಟನೆ ಕುರಿತು ಶಿಕ್ಷಣ ಇಲಾಖೆಯ ತನಿಖೆಯ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

 

 

 

Please Share: