ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರವಿವಾರ ತಾಲೂಕಿನ ದ್ರೆಪುಂಗ್ ಲೋಸೆಲಿಂಗ್ ಮಾನೆಸ್ಟ್ರಿಗೆ ಭೇಟಿ ನೀಡಿ ಬೌದ್ಧ ಧರ್ಮಗುರು ಪವಿತ್ರ ದಲಾಯಿ ಲಾಮಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪವಿತ್ರ ದಲಾಯಿ ಲಾಮಾರ 90ನೇ ಜನ್ಮದಿನದ ಸ್ಮರಣಾರ್ಥ ಆಯೋಜಿಸಲಾದ ಪಂಥಭೇದರಹಿತ ಪಂಡಿತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಮುಂಡಗೋಡಕ್ಕೆ ಆಗಮಿಸಿದ್ದ ಸಚಿವ ಕಿರಣ್ ರಿಜಿಜು, ದಲಾಯಿ ಲಾಮಾರ ಆಶೀರ್ವಾದ ಪಡೆಯುವ ಅವಕಾಶ ದೊರೆತಿರುವುದು ತನಗೆ ಅಪಾರ ಗೌರವ ಹಾಗೂ ಆತ್ಮತೃಪ್ತಿ ತಂದಿದೆ ಎಂದು ಹೇಳಿದರು.

ಭೇಟಿಯ ವೇಳೆ ದಲಾಯಿ ಲಾಮಾ ಅವರು ವಿಶ್ವಶಾಂತಿ, ಸಹಬಾಳ್ವೆ, ಮಾನವೀಯ ಮೌಲ್ಯಗಳ ಮಹತ್ವದ ಕುರಿತು ಸಂದೇಶ ನೀಡಿದರು. ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಚಿವ ಕಿರಣ್ ರಿಜಿಜು ಅವರೊಂದಿಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಥ ನೀಡಿದರು. ಅಲ್ಲದೆ ತಾಲೂಕಾ ಬಿಜೆಪಿ ಮಂಡಲದ ಅಧ್ಯಕ್ಷ ಮಂಜುನಾಥ ಪಾಟೀಲ ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾನೆಸ್ಟ್ರಿಯಲ್ಲಿ ವಿಶೇಷ ಪೂಜೆ ಹಾಗೂ ಆಶೀರ್ವಾದ ಕಾರ್ಯಕ್ರಮಗಳು ನಡೆದಿದ್ದು, ಭದ್ರತಾ ವ್ಯವಸ್ಥೆಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಕೈಗೊಂಡಿತ್ತು. ಪಂಡಿತರ ಸಮಾವೇಶವು ವಿವಿಧ ಧರ್ಮಗಳ ಪಂಡಿತರು, ಚಿಂತಕರು ಹಾಗೂ ಗಣ್ಯರ ಭಾಗವಹಿಸುವಿಕೆಯಿಂದ ವಿಶೇಷ ಮಹತ್ವ ಪಡೆದುಕೊಂಡಿತು.

Please Share: