ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಬಾಡದ ವಾಗ್ಲೇವಾಡ ಬ್ರಹ್ಮಕಟ್ಟಾ ಬಳಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹಂಚಿನ ಮನೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಲತಾ ದಯಾನಂದ ನಾಯ್ಕ ಅವರಿಗೆ ಸೇರಿದ ಮನೆಗೆ ಈ ಅಗ್ನಿ ಅವಘಡದಲ್ಲಿ ವ್ಯಾಪಕ ಹಾನಿಯಾಗಿದೆ.
ಮನೆಯ ಎಲೆಕ್ಟ್ರಿಕ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಅದು ಮನೆಯ ಬೆಡ್ ರೂಮ್ ಗೆ ವ್ಯಾಪಿಸಿದೆ. ಕೋಣೆಯಲ್ಲಿ ಇರಿಸಿದ್ದ ಗೃಹ ಬಳಕೆಯ ಸ್ಪೇರ್ ಗ್ಯಾಸ್ ಸಿಲೆಂಡರ್ಗೆ ಬೆಂಕಿ ತಾಗಿದ್ದು, ಸಿಲೆಂಡರ್ ಸ್ಫೋಟವಾಗುವ ಆತಂಕ ಉಂಟಾಗಿತ್ತು. ಆದರೆ ಅದೃಷ್ಟವಶಾತ್ ಸಿಲೆಂಡರ್ ಸ್ಫೋಟವಾಗದೆ ಭಾರೀ ಅನಾಹುತ ತಪ್ಪಿದೆ.
ಘಟನೆ ನಡೆದ ವೇಳೆ ಮನೆಯವರು ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಕಾರವಾರಕ್ಕೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ವೃದ್ಧೆ ಬೆಂಕಿಯ ತೀವ್ರತೆ ಗಮನಿಸಿ ತಕ್ಷಣವೇ ಮನೆಯ ಹೊರಗೆ ಓಡಿ ಬಂದು ಜೀವಾಪಾಯದಿಂದ ಪಾರಾಗಿದ್ದಾರೆ. ಮಹಿಳೆಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ನಿಟ್ಟುಸಿರು ಬಿಡುವ ಸಂಗತಿಯಾಗಿದೆ.
ಬೆಂಕಿಯ ಆರ್ಭಟದಿಂದ ಮನೆಯ ಬೆಡ್ರೂಂನಲ್ಲಿದ್ದ ಅಲ್ಮೇರಾ, ಕಾಟ್, ಬಟ್ಟೆಗಳು ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಹಂಚಿನ ಮನೆ ಆಗಿದ್ದರಿಂದ ಬೆಂಕಿ ವೇಗವಾಗಿ ವ್ಯಾಪಿಸಿ ಹಾನಿಯ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತು. ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಬಸವರಾಜ್ ಉಳ್ಳಾಗಡ್ಡಿ, ವೀರಭದ್ರಯ್ಯ, ವೀರೇಂದ್ರ ತಾಂಡೇಲ ಹಾಗೂ ಮಿಥುನ ಅಂಕೋಲೆಕರರು ಶ್ರಮಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಸಮಯೋಚಿತ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಪಕ್ಕದ ಮನೆಗಳಿಗೆ ಬೆಂಕಿ ಹರಡುವುದು ತಪ್ಪಿದ್ದು, ಮತ್ತಷ್ಟು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಈ ಅಗ್ನಿ ಅವಘಡದಿಂದ ಮನೆಮಾಲೀಕರಿಗೆ ಲಕ್ಷಾಂತರ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಸಂಪೂರ್ಣ ವಿವರ ಸಂಗ್ರಹಿಸಲಾಗುತ್ತಿದೆ.

