ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಗುರುವಾರ ಮಾಜಿ ಪ್ರಧಾನಿ, ಭಾರತ ರತ್ನ, ದಿವಂಗತ ಅಟ್ಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಹಾಗೂ ದಿನಾಂಕ 03/01/2026 ರಂದು ನಡೆಯಲಿರುವ ಜಿಲ್ಲೆಯ ಪ್ರಸಿದ್ಧ ಸಾಯಿಕಟ್ಟದ ಶ್ರೀ ನರಸಿಂಹ ದೇವರ ಜಾತ್ರಾಮಹೋತ್ಸವದ ಪೂರ್ವಸಿದ್ಧತೆಯ ಭಾಗವಾಗಿ ಸಾಯಿಕಟ್ಟಾ ಪರಿಸರದಲ್ಲಿ ಭಾರೀ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸ್ವಚ್ಛತಾ ಅಭಿಯಾನವನ್ನು ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾದ ದೇವಿದಾಸ ವಿ. ನಾಯ್ಕ ಅವರ ನೇತೃತ್ವದಲ್ಲಿ, ಬಿಜೆಪಿ ಮುಖಂಡೆ ದಿವ್ಯಾ ದೇವಿದಾಸ್ ನಾಯ್ಕ, ಆರ್.ಡಿ. ಬ್ರದರ್ಸ್ ಸಂಸ್ಥೆಯ ಹಿರಿಯರು, ಮಹಿಳೆಯರು ಹಾಗೂ ಯುವಕರ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಯಿತು.

ಜಾತ್ರಾಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರಿಗೆ ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಪರಿಸರ ಒದಗಿಸುವ ಉದ್ದೇಶದಿಂದ ಸಾಯಿಕಟ್ಟದ ದೇವಾಲಯದ ಸುತ್ತಮುತ್ತಲಿನ ಪ್ರದೇಶ, ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂಸೇವಕರು ಕೈಯಲ್ಲಿ ಗದ್ದಲು, ಗರಗಸ, ಚೀಲಗಳನ್ನು ಹಿಡಿದು ತ್ಯಾಜ್ಯ ಸಂಗ್ರಹ, ಪೊದೆ ತೆರವು ಹಾಗೂ ಪರಿಸರ ಸ್ವಚ್ಛತೆಗೆ ಕೈಜೋಡಿಸಿದರು. “ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಅದು ನಿರಂತರ ಜವಾಬ್ದಾರಿ” ಎಂಬ ಸಂದೇಶದೊಂದಿಗೆ ಜನಜಾಗೃತಿ ಮೂಡಿಸಲಾಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿವಾನಂದ್ ಎಲ್. ಮೇತ್ರಿ, ಶಿವಾನಂದ ಬಿ. ನಾಯ್ಕ, ಪ್ರಕಾಶ್ ಪುರುಷನ್, ರಾಜೇಶ್ ಎಸ್. ನಾಯ್ಕ, ಮಾಧವ ಎಲ್. ಮೇತ್ರಿ, ಪಾಂಡುರಂಗ ಎಲ್. ಮೇತ್ರಿ, ಗಣಪತಿ ನಾಯ್ಕ, ವಿನಯ್ ಆರ್. ನಾಯ್ಕ, ಸಂಧ್ಯಾ ವಿ. ನಾಯ್ಕ, ಮನಿಷಾ ಎಂ. ನಾಯ್ಕ, ಕುಮಾರಿ ಹಿರೇಮಠ್, ಪವನ್ ಶೇಟ್, ದಿವ್ಯಾ ದೇವಿದಾಸ್ ನಾಯ್ಕ ಹಾಗೂ ಆರ್.ಡಿ. ಬ್ರದರ್ಸ್ ಮಾಲೀಕರಾದ ರಾಹುಲ್ ಡಿ. ನಾಯ್ಕ ಸೇರಿದಂತೆ ಅನೇಕರು ಸಕ್ರಿಯವಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕರು, ದಿವಂಗತ ಅಟ್ಟಲ್ ಬಿಹಾರಿ ವಾಜಪೇಯಿ ಅವರ ಸರಳತೆ, ರಾಷ್ಟ್ರಭಕ್ತಿ ಹಾಗೂ ಜನಸೇವೆಯ ಆದರ್ಶಗಳನ್ನು ಸ್ಮರಿಸಿ, ಸಮಾಜ ಸೇವೆಯ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವುದಾಗಿ ತಿಳಿಸಿದರು. ಜೊತೆಗೆ ಶ್ರೀ ನರಸಿಂಹ ದೇವರ ಜಾತ್ರಾಮಹೋತ್ಸವದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಕರೆ ನೀಡಿದರು.

ಸ್ವಚ್ಛತಾ ಅಭಿಯಾನದಿಂದ ಸಾಯಿಕಟ್ಟಾ ಪರಿಸರವು ಸ್ವಚ್ಛವಾಗಿ, ಆಕರ್ಷಕವಾಗಿ ಮೂಡಿಬಂದಿದ್ದು, ಸ್ಥಳೀಯ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Please Share: