ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ನಗರದ ಹಳೆ ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಸಮೀಪ ಸೋಮವಾರ ಮಧ್ಯಾಹ್ನ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ಸುಮಾರು 50 ವರ್ಷ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದ್ದು, ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ.

ಸ್ಥಳೀಯರು ದುರ್ವಾಸನೆ ಅನುಭವಿಸಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ನಗರ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆರಂಭಿಕ ಹಂತದಲ್ಲಿ ಅಸಹಜ ಸಾವು ಎಂದು ಪರಿಗಣಿಸಿದ್ದ ಪೊಲೀಸರು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಬಳಿಕ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಶಂಕೆ ದೃಢಪಟ್ಟಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮೃತ ಮಹಿಳೆಯ ತುಟಿಗಳ ಮೇಲೆ ಕಚ್ಚಿದ ಗುರುತುಗಳು ಕಂಡುಬಂದಿವೆ. ಅಲ್ಲದೇ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದನ್ನು ವೈದ್ಯಕೀಯ ವರದಿ ದೃಢಪಡಿಸಿದೆ. ಅತ್ಯಂತ ಆತಂಕಕಾರಿ ಅಂಶವೆಂದರೆ ಮೃತದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ಇದರಿಂದ ಪ್ರಕರಣದ ಗಂಭೀರತೆ ಮತ್ತಷ್ಟು ಹೆಚ್ಚಾಗಿದೆ.

ಸದ್ಯದ ತನಿಖೆಯ ಹಂತದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ವೈಜ್ಞಾನಿಕ ದೃಢ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದ್ದು, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗಿದೆ.

ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೃತ ಮಹಿಳೆಯ ಗುರುತು ಪತ್ತೆಹಚ್ಚಲು ಹಾಗೂ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸ್ಥಳೀಯರನ್ನು ವಿಚಾರಣೆ ಮಾಡಲಾಗುತ್ತಿದೆ.

ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮಾತನಾಡಿ, “ಪ್ರಕರಣದ ಎಲ್ಲಾ ಆಯಾಮಗಳನ್ನೂ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ. ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿದರೆ ಸಹಕಾರವಾಗಲಿದೆ” ಎಂದು ತಿಳಿಸಿದ್ದಾರೆ.

ಹಗಲಿನಲ್ಲಿ ಜನಸಂಚಾರ ಇರುವ ಪ್ರದೇಶದಲ್ಲೇ ಈ ರೀತಿಯ ಭೀಕರ ಘಟನೆ ಸಂಭವಿಸಿರುವುದು ನಗರದಲ್ಲಿ ಭದ್ರತೆ ಕುರಿತ ಆತಂಕವನ್ನು ಹೆಚ್ಚಿಸಿದೆ. ಪ್ರಕರಣದ ಬೆಳವಣಿಗೆಗಳತ್ತ ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.

 

 

Please Share: